ನಾವು ದಿನಾಲು ಉಪಯೋಗಿಸುವ ಬೆಳ್ಳುಳ್ಳಿಯಲ್ಲಿ ಎಷ್ಟೊಂದು ಆರೋಗ್ಯ ಲಾಭಗಳಿವೆ ಎಂಬುದು ನಿಮಗೆ ಗೊತ್ತಿರಲಿ. ಬೆಳ್ಳುಳ್ಳಿಯಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಸಂಸ್ಕೃತದಲ್ಲಿ ಬೆಳ್ಳುಳ್ಳಿಯನ್ನು ರಸೋನ ಎಂದು ಕರೆಯುತ್ತಾರೆ.
ಬೆಳ್ಳುಳ್ಳಿಯ ಗುಣಗಳು – ಸ್ನಿಗ್ಧ, ತೀಕ್ಷ್ಣ, ಗುರು, ರುಚಿಕಾರಕ, ದೀಪನ, ಪಾಚನ, ಖಾರ, ವೇದನೆಯನ್ನು ಕಡಿಮೆ ಮಾಡುವಂತಹ ಗುಣವಿರುವುದು. ವಾತ ಹಾಗು ಕಫ ದೋಷವನ್ನು ನಿಯಂತ್ರಣದಲ್ಲಿಡುತ್ತದೆ. ಬೆವರನ್ನು ಉತ್ಪನ್ನ ಮಾಡುವಂತಹದು.
ಆರೋಗ್ಯ ಲಾಭಗಳು ಹೀಗಿವೆ :
ಬೆಳ್ಳುಳ್ಳಿಯು ಹೃದಯಕ್ಕೆ ಅತ್ಯುತ್ತಮ ದ್ರವ್ಯ ಎನ್ನಬಹುದು. ಕೊಲೆಸ್ಟ್ರಾಲ್, ರಕ್ತದೊತ್ತಡ, ಹಾರ್ಟ್ ಬ್ಲಾಕ್ ಅನ್ನು ತಡೆಯುವ ಶಕ್ತಿ ಇದಕ್ಕಿದೆ. ಎರಡು ಬೆಳ್ಳುಳ್ಳಿಯ ಬೀಜವನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ ಅದರ ಜೊತೆ ಬೆಲ್ಲ ಅಥವಾ ನೀರನ್ನು ಸೇವಿಸಬಹುದು ಅಥವಾ ಒಂದು ಬೆಳ್ಳುಳ್ಳಿ ಬೀಜ 100ml ನೀರು ಹಾಗು 100ml ಹಾಲನ್ನು ಅರ್ಧ ಪ್ರಮಾಣ ಬರುವವರೆಗೆ ಕುದಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಲಾಭಕಾರಿ.

ಬೆಳ್ಳುಳ್ಳಿಯು ಕೂದಲಿನ ಸಮಸ್ಯೆಯನ್ನು ದೂರ ಮಾಡುತ್ತದೆ. ಡ್ಯಾಂಡ್ರಫ್, ಕೂದಲು ಉದುರುವ ಸಮಸ್ಯೆ ಇದ್ದರೆ ದಿನಾಲೂ ಎರಡು ಬೆಳ್ಳುಳ್ಳಿಯನ್ನು ಸೇವಿಸಿ. ಬೆಳ್ಳುಳ್ಳಿಯ ರಸ ಸೇವಿಸುವುದರಿಂದ ಅಥವಾ ಬೆಳ್ಳುಳ್ಳಿಯ ಕಲ್ಕದ ಲೇಪನ ಮಾಡುವುದರಿಂದ ಸಂಧಿವಾತ, ಸಯಾಟಿಕಾ, ಪ್ಯಾರಲಿಸಿಸ್, ಕೀಲು ನೋವು ಕಡಿಮೆಯಾಗುತ್ತದೆ.
ದಿನಾಲು ಬೆಳ್ಳುಳ್ಳಿಯನ್ನು ಸೇವಿಸಿದಾಗ ದೇಹ ಬಲವನ್ನು ಹೆಚ್ಚುತ್ತದೆ. ಅರುಚಿ, ಅಜೀರ್ಣ, ಹೊಟ್ಟೆನೋವು, ಕ್ರಿಮಿ, ಮೂಲವ್ಯಾಧಿ ಸಮಸ್ಯೆಯನ್ನು ಗುಣಪಡಿಸುತ್ತದೆ. ತ್ವಚೆಯ ಸಮಸ್ಯೆಗಳಲ್ಲಿ ಶೋಥ ಅಥವಾ ವೇದನೆ ಇದ್ದಾಗ ಬೆಳ್ಳುಳ್ಳಿ ತೈಲವನ್ನು ಹಚ್ಚುವುದರಿಂದ ಸಮಸ್ಯೆಯು ದೂರವಾಗುತ್ತದೆ. ಮಹಿಳೆಯರಲ್ಲಿ ಪಿಸಿಒಡಿ, ಫೈಬ್ರಾಯ್ಡ್ ಸಮಸ್ಯೆಗಳಲ್ಲಿ ಬೆಳ್ಳುಳ್ಳಿ ಸೇವನೆ ಉತ್ತಮ ಪರಿಣಾಮವನ್ನು ಕೊಡುತ್ತದೆ. ಸಕ್ಕರೆ ಕಾಯಿಲೆ, ಬೊಜ್ಜುತನವನ್ನು ನಿಯಂತ್ರಿಸುತ್ತದೆ. ಶ್ವಾಸ ಕೋಶದ ಸಮಸ್ಯೆಗಳಲ್ಲಿ, ಕೆಮ್ಮು, ಅಸ್ತಮಾ, ಸೈನಸ್, ಟಿಬಿ ಇರುವವರು ಬೆಳ್ಳುಳ್ಳಿಯನ್ನು ಸೇವಿಸಿದರೆ ಒಳ್ಳೆಯದು. ನೇತ್ರಗಳಿಗೆ ಹಿತಕಾರಿ. ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಿವಿ ನೋವು ಇದ್ದಾಗ ಎರಡು ಹನಿ ಬೆಳ್ಳುಳ್ಳಿ ಎಣ್ಣೆಯನ್ನು ಹಾಕಿದರೆ ಕಿವಿ ನೋವು ಗುಣವಾಗುತ್ತದೆ. ಉರಿಮೂತ್ರ, ಜ್ವರ, ಟೈಫಾಯಿಡ್, ಡಿಪ್ತೀರಿಯಾ ರೋಗವನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ. ಎರಡು ಎಸಳು ಬೆಳ್ಳುಳ್ಳಿಯನ್ನು ಎಳ್ಳೆಣ್ಣೆಯಲ್ಲಿ ಹುರಿದು ಆ ಎಣ್ಣೆಯನ್ನು ಸಂದುಗಳಿಗೆ ಹಚ್ಚಿದಾಗ ಕೀಲು ನೋವು ಕಡಿಮೆಯಾಗುವುದು.
ಬೆಳ್ಳುಳ್ಳಿಯನ್ನು ಉಪಯೋಗಿಸಿ ಮಾಡಿದಂತಹ ಆಯುರ್ವೆದಿಕ್ ಔಷಧಗಳು – ರಸೋನಾದಿ ವಟಿ, ರಸೋನಾಸ್ಟಕ, ರಸೋನ ಪಿಂಡ, ಲಶುನ ಘೃತ ಮುಂತಾದವುಗಳು.
ಬೆಳ್ಳುಳ್ಳಿಯನ್ನು ಯಾವಾಗ ಉಪಯೋಗಿಸಬಾರದು – ಪಿತ್ತ ಹಾಗೂ ರಕ್ತ ರೋಗಿಗಳಲ್ಲಿ, ರಕ್ತಸ್ರಾವದ ಸಂದರ್ಭ, ಗರ್ಭಿಣಿಯರು, ಬೇಸಿಗೆಯಲ್ಲಿ, ಪಿತ್ತ ಪ್ರಕೃತಿಯ ವ್ಯಕ್ತಿಗಳು, ಬೆಳ್ಳುಳ್ಳಿಯನ್ನು ಕಡಿಮೆ ಸೇವಿಸಿರಿ.
ಮಳೆಗಾಲದಲ್ಲಿ ಉಪಯೋಗಿಸಿದರೆ ಅತ್ಯುತ್ತಮ. ಬೆಳ್ಳುಳ್ಳಿಯ ಚಟ್ನಿ, ವಿವಿಧ ಅಡುಗೆಗಳಲ್ಲಿ ಉಪಯೋಗಿಸಿ ದಿನಾಲೂ ಸೇವಿಸಿರಿ. ಆದರೆ ಅಧಿಕ ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ಸೇವಿಸದಿರಿ. ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಉತ್ತಮಆರೋಗ್ಯ ಲಾಭವನ್ನು ಪಡೆಯಬಹುದು.





































