ಕಾರ್ಕಳ : ಪ್ರಸ್ತುತ ಓದುವ ವಿಧಾನ ಬದಲಾಗಿ ವಿದ್ಯಾರ್ಥಿಗಳಿಗೆ ಓದಿದ ವಿಷಯಗಳು ಮರೆತು ಹೋಗುತ್ತಿದೆ. ಕೇವಲ ಪರೀಕ್ಷೆಗೋಸ್ಕರ ಓದದೆ ಜ್ಞಾನಕೋಸ್ಕರ ಓದುವಂತವರಾಗಬೇಕು. ಆಗ ಮಾತ್ರ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯ ಎಂದು ಜೆಸಿಐ ರಾಷ್ಟ್ರೀಯ ತರಬೇತಿದಾರ ರಾಜೇಂದ್ರ ಭಟ್ ಕೆ. ಹೇಳಿದರು. ಅವರು ಜೂ. 27 ರಂದು ಕ್ರಿಯೇಟಿವ್ ಕಾಲೇಜಿನಲ್ಲಿ ನಡೆದ ಸ್ಪೂರ್ತಿಯ ಮಾತು ಸರಣಿ ಕಾರ್ಯಕ್ರಮದ ಒಂದು ಹಬ್ಬ – ಸಂಭ್ರಮಿಸೋಣ ಎಂಬ ಶೀರ್ಷಿಕೆಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದರು.
ಶರೀರದ ಒಳಗಿನಿಂದ ಎನರ್ಜಿ ಸೃಷ್ಟಿಸಿಕೊಂಡಾಗ ದೊರೆಯುವುದೇ ಸ್ಫೂರ್ತಿ, ವಿದ್ಯಾರ್ಥಿಗಳು ಪ್ರಯೋಗ ಮಾಡಬಹುದಾದ 10 ಸ್ಪೂರ್ತಿಗಳ ಬಗ್ಗೆ ಉದಾಹರಣೆಗಳನ್ನು ನೀಡುತ್ತಾ ತಿಳಿಸಿದರು. ಎಲ್ಲಾ ವಿದ್ಯಾರ್ಥಿಗಳು ಅದ್ಭುತವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಓದುವಿಕೆಯಲ್ಲಿ ಮೌನ, ಓದುವಿನಿಂದಾಗುವ ಅನೇಕ ಲಾಭಗಳನ್ನು ತಿಳಿಸುತ್ತಾ, ಸ್ಮಾರ್ಟ್ ವರ್ಕ್ ಮಾಡಿದರೆ ಯಾವುದೇ ವಿಷಯಗಳು ಕಠಿಣವೆನಿಸುವುದಿಲ್ಲ ಕಡಿಮೆ ಪರಿಶ್ರಮ ಹಾಕಿ, ಆಸಕ್ತಿಯಿಂದ ಕೆಲಸ ಮಾಡುವುದೇ ಸ್ಮಾರ್ಟ್ ವರ್ಕ್ ಎಂದು ತಿಳಿಸಿದರು.
ಸಹ ಸಂಸ್ಥಾಪಕರಾದ ಅಶ್ವತ್ ಎಲ್., ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ವರ್ಗದವರು, ನಿಲಯ ಪಾಲಕರು ಹಾಗೂ ಬೋಧಕೇತರ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ಪ್ರಿಯಾಂಕ ನಿರೂಪಿಸಿ ವಂದಿಸಿದರು.



































