ಜೂ. 16ರಂದು ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ಗೆ ಹುಸಿ ಬಾಂಬ್ ಬೆದರಿಕೆ
ಉಡುಪಿ : ಕರ್ನಾಟಕದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಹಲವು ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸುತ್ತಿದ್ದ ಯುವತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಚೈನ್ನೈ ಮೂಲದ ಇಂಜಿನಿಯರ್ ರೀನಾ ಜೊಶಿಲ್ಡ ಆಗಿದ್ದು, ಈಕೆಯನ್ನು ಗುಜರಾತ್ನ ಅಹಮದಾಬಾದ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ರೀನಾ ಜೂನ್ 16ರಂದು ಉಡುಪಿ ನಗರದ ವಿದ್ಯೋದಯ ಪಬ್ಲಿಕ್ ಸ್ಕೂಲ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯೊಡ್ಡಿದ್ದಳು. ಬೆದರಿಕೆ ಸಂದೇಶದಲ್ಲಿ ನಿಮ್ಮ ಶಾಲೆಯಲ್ಲಿ ಬಾಂಬ್ ಸ್ಫೋಟಿಸಿದರೆ ಮಕ್ಕಳು ಸಾಯುತ್ತಾರೆ. ಮಕ್ಕಳು ಸತ್ತರೆ ಮಾತ್ರ ಪೋಷಕರು ಪ್ರತಿಭಟನೆ ಮಾಡುತ್ತಾರೆ. ಪೊಲೀಸರು ಸರಿಯಾದ ತನಿಖೆ ನಡೆಸಿ ಹೈದರಾಬಾದಿನ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸುತ್ತಾರೆ’ ಎಂದು ಲ್ಲೇಖಿಸಲಾಗಿತ್ತು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಆರೋಪಿ ಇದೇ ರೀತಿಯ ಇ-ಮೇಲ್ ಸಂದೇಶ ಕಳುಹಿಸಿದ್ದಳು.

ಸದ್ಯ, ಗುಜರಾತಿನ ಅಹಮದಾಬಾದ್ ಪೊಲೀಸರಿಂದ ಆರೋಪಿ ರೀನಾ ಜೋಶಿಲ್ಡ ವಿಚಾರಣೆ ನಡೆಯುತ್ತಿದೆ. ಆಕೆಯನ್ನು ಉಡುಪಿಯ ಶಾಲೆಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಕಸ್ಟಡಿ ನೀಡಲು ಉಡುಪಿ ಪೊಲೀಸರು ಮನವಿ ಮಾಡಿದ್ದಾರೆ.
ಅಹಮದಾಬಾದ್ ಪೊಲೀಸರ ತನಿಖೆ ಮುಗಿದ ನಂತರ ಆರೋಪಿಯನ್ನು ನಮ್ಮ ವಶಕ್ಕೆ ನೀಡುವ ಸಾಧ್ಯತೆ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.



























