ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

ಉಡುಪಿ : ಜನಸಾಮಾನ್ಯರು ಸರಕಾರದ ಮೇಲೆ ನಿರೀಕ್ಷೆ ಇಟ್ಟುಕೊಂಡು ತಮ್ಮ ಕೆಲಸ ಕಾರ್ಯಗಳಿಗಾಗಿ ಕಚೇರಿಗಳಿಗೆ ಬರುತ್ತಾರೆ. ಅವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವುದರೊಂದಿಗೆ ನಿಯಮಾನುಸಾರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅವರು ಜೂ. 20ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಹಾಗೂ ಪೂರ್ವ ಮುಂಗಾರು ಮಳೆಯು ಯಥೇಚ್ಛವಾಗಿ ಸುರಿದಿದೆ. ಅಲ್ಪಪ್ರಮಾಣದ ಪ್ರವಾಹಗಳು ಉಂಟಾಗಿವೆ. ಮುಂಬರುವ ಮುಂಗಾರು ಮಳೆಯು ಹೆಚ್ಚಾಗಿ ಬರಬಹುದೆಂಬ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಪ್ರವಾಹ ಸಂದರ್ಭದಲ್ಲಿ ಹೆಚ್ಚಿನ ಮಾನವ ಹಾಗೂ ಜಾನುವಾರುಗಳ ಪ್ರಾಣಹಾನಿ ಮತ್ತು ಆಸ್ತಿಗಳಿಗೆ ಹಾನಿಯಾಗದಂತೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕೈಗೊಳ್ಳಬೇಕು ಎಂದರು.

ರೈತರಿಗೆ ಸೂಕ್ತ ಪರಿಹಾರ ಒದಗಿಸಿ
ವಾರಾಹಿ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳಲು ಐದು ವರ್ಷಗಳ ಹಿಂದೆ ರೈತರ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಅವರಿಗೆ ಭೂ ಪರಿಹಾರದ ಹಣವನ್ನು ನೀಡಿಲ್ಲ. ಇದರಿಂದಾಗಿ ರೈತರು ತಮ್ಮ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಮುಂದಿನ ಸಭೆಯ ಒಳಗಾಗಿ ರೈತರಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದ ಅವರು, ಈ ಕಾಮಗಾರಿಗೆ ಅಗತ್ಯವಿರುವ ಭೂಮಿಯು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿಯೂ ಇವೆ. ಇವುಗಳ ಕ್ಲಿಯರೆನ್ಸ್ ಅನ್ನು ಅರಣ್ಯ ಇಲಾಖೆಯವರು ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಕೃಷಿ ಚಟುವಟಿಕೆಗಳು ಈಗಾಗಲೇ ಗರಿಗೆದರಿವೆ. ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕವಾಗಿ ವಿತರಿಸುವಂತೆ ಕ್ರಮಕೈಗೊಳ್ಳಬೇಕೆಂದ ಸಚಿವರು ಕಳೆದ ಸಾಲಿನಲ್ಲಿ ಬಿತ್ತನೆ ನೆಲಗಡಲೆ ಬೀಜ ಕಳಪೆ ಇರುವುದನ್ನು ರೈತರಿಗೆ ವಿತರಿಸಿರುವ ಬಗ್ಗೆ ದೂರುಗಳು ಇವೆ. ಕಳಪೆ ಬೀಜವಾದಲ್ಲಿ ಸರಬರಾಜು ಮಾಡಿದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕೆಂದರು.

ಸಮುದ್ರದ ಏರಿಳಿತದಿಂದಾಗಿ ಕಡಲ ಕೊರೆತ ಉಂಟಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಸರಕಾರ 5 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಹೆಜಮಾಡಿಯಿಂದ ಶಿರೂರುವರೆಗೆ ಕಡಲ್ಕೊರೆತ ಸಂಭವವಿರುವ ಪ್ರದೇಶಗಳನ್ನು ಗುರುತಿಸಿ, ಶಾಶ್ವತ ಕಾಮಗಾರಿ ಕೈಗೊಳ್ಳಲು 60 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿದ್ದು, ಇದನ್ನು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.

ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರ ತೋಟಗಳಿಗೆ ಭೇಟಿ ನೀಡಬೇಕು. ಅವುಗಳು ಉತ್ತಮವಾಗಿ ನಿರ್ವಹಣೆ ಮಾಡುವ ಬಗ್ಗೆ ಸಲಹೆ, ಸೂಚನೆಗಳನ್ನು ರೈತರಿಗೆ ನೀಡುವುದರ ಜೊತೆಗೆ ಸರಕಾರದ ಯೋಜನೆಗಳು ಅವರಿಗೆ ತಲುಪಿಸುವ ಕಾರ್ಯ ಮಾಡಬೇಕು. ರೈತರು ಹೆಚ್ಚಿನ ಆದಾಯ ಗಳಿಸುವಂತೆ ಮಾಡಬೇಕು. ಸಾಂಪ್ರದಾಯಿಕ ಅಡಿಕೆ, ತೆಂಗು, ಕಾಳು ಮೆಣಸು ಬೆಳೆಗಳನ್ನು ಬೆಳೆಯಲಾಗುತ್ತದೆ. ಇವುಗಳ ಜೊತೆಯಲ್ಲಿ ಹಣ್ಣುಗಳು, ಜಾಯಿಕಾಯಿ, ಮಾವಿನ ಹಣ್ಣು, ಹಲಸು, ಜಾಂಬು ಸೇರಿದಂತೆ ಮತ್ತಿತರ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ಮುಂದಿನ ಕೆ.ಡಿ.ಪಿ. ಸಮಯದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ನಿಖರವಾದ ಮಾಹಿತಿಗಳನ್ನು ನೀಡಬೇಕೆಂದು ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಪ್ರಾಕೃತಿಕ ಸೊಬಗು ಹಾಗೂ ಧಾರ್ಮಿಕ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಪ್ರವಾಸಿ ತಾಣಗಳಿಗೆ ಇನ್ನೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯಗಳು ಆಗಬೇಕು. ಅವರುಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಪ್ರವಾಸೋದ್ಯಮವನ್ನು ಇನ್ನಷ್ಟು ಹೆಚ್ಚಿಸಬೇಕು. ಸಾಧ್ಯವಾದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದರು.

ಅನಧಿಕೃತ ಹೋಂ ಸ್ಟೇಗೆ ಕಡಿವಾಣ ಹಾಕಿ
ಅನಧಿಕೃತ ಹೋಂ ಸ್ಟೇಗಳಿಗೆ ಕಡಿವಾಣ ಹಾಕಬೇಕು. ಪ್ರವಾಸಿ ಚಟುವಟಿಕೆ ಕಾರ್ಯಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ನೇಮಿಸಿಕೊಳ್ಳದಂತೆ ಕ್ರಮವಹಿಸಬೇಕು ಎಂದರು. ಸಾರ್ವಜನಿಕರು ಗೃಹ ನಿರ್ಮಾಣ ಕೈಗೊಳ್ಳಲು ಅಗತ್ಯವಿರುವ ಮರಳು, ಕಲ್ಲು, ಕೆಂಪು ಇಟ್ಟಿಗೆ ಸೂಕ್ತ ಬೆಲೆಗೆ ಸಿಗುವಂತೆ ಕ್ರಮವಹಿಸಬೇಕು ಎಂದ ಸಚಿವರು, ಅನಧಿಕೃತವಾಗಿ ಮರಳು ಗಣಿಗಾರಿಕೆ, ಸಾಗಾಣಿಕೆ, ಮಾರಾಟಕ್ಕೆ ಪೂರ್ಣಪ್ರಮಾಣದಲ್ಲಿ ಕಡಿವಾಣ ಹಾಕಬೇಕು. ಕೆಂಪುಕಲ್ಲು ಗಣಿಗಾರಿಕೆಗೆ ಗಣಿ ಇಲಾಖೆಯಿಂದ ಪರವಾನಿಗೆ ಲಭಿಸಿದ್ದರೂ ಅರಣ್ಯ ಇಲಾಖೆಯವರ ಹಸ್ತಕ್ಷೇಪದಿಂದ ಕೈಗೊಳ್ಳಲು ಆಗುತ್ತಿಲ್ಲ. ಇವು ನಿಯಮಾನುಸಾರ ಮಾಡಲು ಅನುಮತಿ ನೀಡಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸೂಚನ ಫಲಕ ಅಳವಡಿಸಿ
ಆಗುಂಬೆ ಘಾಟಿನಲ್ಲಿ ತೀವ್ರ ತರಹದ ತಿರುವುಗಳಿದ್ದು, ಅಪಘಾತಗಳಾಗುವ ಸಾಧ್ಯತೆಗಳು ಇವೆ. ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯವಿರುವ ಸೂಚನಾ ಫಲಕಗಳನ್ನು ನಿಗಧಿತ ಸ್ಥಳದಲ್ಲಿ ಅಳವಡಿಸಬೇಕು ಹಾಗೂ ರಸ್ತೆಯ ಪಕ್ಕದ ತಡೆಗೋಡೆ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳುವುದರ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಿ, ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿಸಲು ಪರಿಸರ ಇಲಾಖೆಯ ಅಧಿಕಾರಿಗಳು ಕೈಜೋಡಿಸಬೇಕು ಎಂದರು.

ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಬೇಕು. ನೂತನ ಜಿಲ್ಲಾ ಆಸ್ಪತ್ರೆಯ ಕಾಮಗಾರಿಯನ್ನು ವೇಗವನ್ನು ಹೆಚ್ಚಿಸಬೇಕು. ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಸರಕಾರದಿಂದ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದ ಸಚಿವರು, ಆರೋಗ್ಯ ಇಲಾಖೆ ವರ್ಗಾವಣೆಯಲ್ಲಿ ಪಾರದರ್ಶಕತೆ ಇರಬೇಕು. ತಾಯಿ ಮಕ್ಕಳ ಆಸ್ಪತ್ರೆ ನಿರ್ವಹಣೆ ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಸರಕಾರಿ ಶಾಲೆಗಳ ಕಟ್ಟಡ ದುರಸ್ತಿ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಯಾವುದೇ ಒಂದು ಮಗುವು ಶಾಲೆಯಿಂದ ಹೊರಗುಳಿಯದ ಹಾಗೆ ನೋಡಿಕೊಳ್ಳಬೇಕು. ಕೆಲವು ಖಾಸಗಿ ಶಾಲೆಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರತಿಶರ್ತ ನೂರರಷ್ಟು ಫಲಿತಾಂಶ ಬರಬೇಕೆಂಬ ಉದ್ದೇಶದಿಂದ ಒಂಭತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅನುತ್ತೀರ್ಣ ಮಾಡುತ್ತಿರುವ ಬಗ್ಗೆ ಹಾಗೂ ಸರಕಾರಿ ಶಾಲೆಗೆ ಸೇರಲು ವರ್ಗಾವಣೆ ಪತ್ರ ನೀಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುವಂತೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳಿಗೆ ಲಾಪ್ ಟಾಪ್ ವಿತರಣೆ
ಗ್ರಾಮ ಲೆಕ್ಕಾಧಿಕಾರಿ(ವಿಎ)ಗಳಿಗೆ ಲ್ಯಾಪ್‌ ಟ್ಯಾಪ್‌ ವಿತರಿಸಿ ಮಾತನಾಡಿದ ಸಚಿವರು ಕಂದಾಯ ಇಲಾಖೆಯಲ್ಲಿ ಜನ ಸಾಮಾನ್ಯರ ಕೆಲಸ ಕಾರ್ಯಗಳು ಮತ್ತಷ್ಟು ವೇಗವಾಗಿ ಆಗಬೇಕೆಂಬ ದೃಷ್ಟಿಯಿಂದ ‌ಸರಕಾರದ ವತಿಯಿಂದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲಾಪ್‌ಟಾಪ್ ನೀಡಲಾಗುತ್ತಿದೆ. ವಿಎಯವರು ಜನ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು. ಈ ಮೂಲಕ ಸರಕಾರಕ್ಕೆ ಒಳ್ಳೆಯ ಹೆಸರು ತರಬೇಕು ಎಂದ ಸಚಿವರು, ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಕೆಲಸದ ಬಗ್ಗೆ ನಿಸ್ವಾರ್ಥ ಇರುವ ವ್ಯಕ್ತಿ. ಈ ಹಿಂದೆ ಕೃಷಿ ಮಂತ್ರಿಯಾಗಿ ಕೃಷಿ ವಲಯದಲ್ಲಿ ಕ್ರಾಂತಿ ಮಾಡಿದರು ಅವರು ಎಂದರು.

ಶಾಸಕರಾದ ಯಶ್‌ಪಾಲ್ ಎ. ಸುವರ್ಣ , ಎ. ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್‌ ಶೆಟ್ಟಿ, ಗುರುರಾಜ್ ಶೆಟ್ಟಿ ಗಂಟಿಹೊಳೆ, ವಿಧಾ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಡಾ. ಧನಂಜಯ ಸರ್ಜಿ ಹಾಗೂ ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಹರಿರಾಂ ಶಂಕರ್, ಡಿಎಫ್‌ಓ ಗಣಪತಿ, ವೈಲ್ಡ್‌ಲೈಫ್ ಡಿಎಫ್‌ಓ ಶಿವರಾಮ ಎಂ.ಬಾಬು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕೊಡವೂರು, ಕೆ.ಡಿ.ಪಿ. ಸದಸ್ಯರು, ಜಿಲ್ಲಾ ಮಟ್ಟದ ಅನುಷ್ಟಾನಾಧಿಕಾರಿಗಳು‌ ಉಪಸ್ಥಿತರಿದ್ದರು.



































































































error: Content is protected !!
Scroll to Top