ಗೃಹ ಸಚಿವ ಪರಮೇಶ್ವರ್‌ಗೆ ಇ.ಡಿ. ಶಾಕ್‌ – ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ

ತುಮಕೂರು : ಗೃಹ ಸಚಿವ ಡಾ. ಜಿ. ಪರಮೇಶ್ವರ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ತುಮಕೂರಿನ ಹೆಗ್ಗೆರೆ ಬಳಿಯಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು, ತುಮಕೂರಿನ ಎಸ್​ಎಸ್​ಐಟಿ ಕಾಲೇಜಿನ ಮೇಲೆ ಇಡಿ ದಾಳಿ ನಡೆದಿದೆ. ಅಲ್ಲದೆ, ನೆಲಮಂಗಲದ ಟಿ. ಬೇಗೂರಿನಲ್ಲಿರುವ ಕಾಲೇಜಿನ ಮೇಲೂ ರೇಡ್ ಮಾಡಲಾಗಿದೆ. ಸದ್ಯ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಎಸ್ಎಸ್ಐಟಿ ಕಾಲೇಜಿನ ಮೇಲೆ ಇಡಿ ದಾಳಿ ನಡೆದಿದೆ. ಮೂರು ಕಾರುಗಳಲ್ಲಿ ಬಂದ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಎಸ್ಎಸ್ಐಟಿ ಕಾಲೇಜಿನಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ, ಮಾಧ್ಯಮ ಪ್ರತಿನಿಧಿಗಳು ಕಾಲೇಜು ಆವರಣದ ಒಳಗೆ ಬಾರದಂತೆ ಡಿವೈಎಸ್​​ಪಿ ತಾಕೀತು ಮಾಡಿದ್ದಾರೆ. ಅಲ್ಲದೆ, ಡಿವೈಎಸ್​ಪಿ ನೇತೃತ್ವದಲ್ಲಿ ಕಾಲೇಜಿಗೆ ಭದ್ರತೆ ಒದಗಿಸಲಾಗಿದೆ.

2019ರಲ್ಲಿ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮೇಲೆ ಐಟಿ ದಾಳಿ ನಡೆದಿತ್ತು. ಆಗ ವೈದ್ಯಕೀಯ ಸೀಟು ಅಕ್ರಮ ಹಂಚಿಕೆ ಆರೋಪ ಸಂಬಂಧ ಐಟಿ ದಾಳಿ ನಡೆದಿತ್ತು. ಆ ವೇಳೆ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಬೆಳವಣಿಗೆಯ ನಂತರ ರಮೇಶ್ ಬೆಂಗಳೂರಿನ ಜ್ಞಾನ ಭಾರತಿ ವಿವಿ ಕ್ಯಾಂಪಸ್ ವ್ಯಾಪ್ತಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಚಾರ ಕರ್ನಾಟಕ ರಾಜಕೀಯದಲ್ಲಿಯೂ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು.































































error: Content is protected !!
Scroll to Top