ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಮ್ಯಾನೇಜರ್ ವರ್ಗಾವಣೆ

ಬೆಂಗಳೂರು : ಆನೇಕಲ್ ತಾಲೂಕು ಸೂರ್ಯ ನಗರ ಎಸ್​ಬಿಐ ಕಚೇರಿಯಲ್ಲಿ ಮ್ಯಾನೇಜರ್ ಕನ್ನಡ ಮಾತಾಡಲ್ಲ ಎಂದು ಹೇಳಿದ್ದ ವಿಡಿಯೋ ವೈರಲ್‌ ಆಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಮ್ಯಾನೇಜರನ್ನು ವರ್ಗಾವಣೆ ಮಾಡಲಾಗಿದೆ.

ಏನಿದು ಘಟನೆ?
ಹಣ ವರ್ಗಾವಣೆಗಾಗಿ ಮಹೇಶ್ ಎಂಬುವವರು ಬೆಳಗ್ಗೆ 10.27ಕ್ಕೆ ಬ್ಯಾಂಕಿಗೆ ಹೋಗಿದ್ದರು. ಯಾವ ಕೌಂಟರ್‌ಗಳಲ್ಲೂ ಸಿಬ್ಬಂದಿ ಕಾಣಿಸಲಿಲ್ಲ. ಅಲ್ಲಿದ್ದ ಒಬ್ಬರನ್ನು ಪ್ರಶ್ನಿಸಿದಾಗ ನಾವು ಬರುವವರೆಗೆ ಕಾಯಿರಿ ಎಂದರು. ಈ ವರ್ತನೆಯಿಂದ ಬೇಸರವಾಗಿ, ಕೆಲಸದ ಅವಧಿಯಲ್ಲಿ ಸಿಬ್ಬಂದಿ ಏಕೆ ಕೌಂಟರ್‌ನಲ್ಲಿಲ್ಲ? ಇದನ್ನು ವ್ಯವಸ್ಥಾಪಕರ ಬಳಿ ಪ್ರಶ್ನಿಸುತ್ತೇನೆ ಎಂದು ಅವರ ಕೊಠಡಿ ಬಳಿ ಹೋದರು. ʼಸಮಯ 10.30 ಆದರೂ, ಸಿಬ್ಬಂದಿ ಇಲ್ಲʼ ಎಂದು ಸೌಮ್ಯವಾಗಿಯೇ ವ್ಯವಸ್ಥಾಪಕರಲ್ಲಿ ಕೇಳಿಕೊಂಡರಂತೆ. ಅದಕ್ಕೆ ಮ್ಯಾನೇಜರ್ ʼನನಗೆ ಕನ್ನಡ ಗೊತ್ತಿಲ್ಲ. ಹಿಂದಿಯಲ್ಲಿ ಮಾತನಾಡು’ ಎಂದು ಅತ್ಯಂತ ದರ್ಪದಿಂದ ಅವರು ಮಾತನಾಡಿದರಂತೆ. ಈ ನಾಡಿನ ಭಾಷೆ ಕನ್ನಡ, ಕನ್ನಡದಲ್ಲಿ ಸೇವೆ ಒದಗಿಸಬೇಕಾಗಿರುವುದು ಬ್ಯಾಂಕ್ ಕರ್ತವ್ಯ. ಈ ಬಗ್ಗೆ ಆದೇಶ ಮತ್ತು ನಿಯಮವಿದೆ ಎಂದು ಹೇಳಿದೆ. ಆಗ ಮತ್ತಷ್ಟು ಕೆರಳಿದ ಅವರು ದುರ್ವತನೆ ತೋರಲು ಆರಂಭಿಸಿದಾಗ ಫೇಸ್ ಬುಕ್‌ನಲ್ಲಿ ಲೈವ್ ಆರಂಭಿಸಿದ್ದಾಗಿ ಹೇಳಿದರು.

ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬ್ಯಾಂಕ್‌ಗಳಲ್ಲಿ ಆಯಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಉದ್ಯೋಗಿಗಳು ಸೇವೆ ನೀಡುವುದನ್ನು ಕಡ್ಡಾಯಗೊಳಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಸ್ಥಳೀಯ ಭಾಷೆ ಬಗ್ಗೆ ಬ್ಯಾಂಕ್ ಸಿಬ್ಬಂದಿಗೆ ತರಬೇತಿ ನೀಡಿ – ಸಿಎಂ
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಸ್ ಬಿಐ ಬ್ಯಾಂಕ್ ಮ್ಯಾನೇಜರ್ ಅವರ ನಡತೆ ಸ್ವೀಕಾರಾರ್ಹವಲ್ಲ, ಇಂತಹ ವರ್ತನೆ ಖಂಡನೀಯ, ಅವರನ್ನು ತಕ್ಷಣವೇ ವರ್ಗಾಯಿಸಿ ಕ್ರಮ ತೆಗೆದುಕೊಂಡ ಎಸ್‌ಬಿಐ ಕ್ರಮ ಶ್ಲಾಘನೀಯ. ಇಂತಹ ಘಟನೆ ಮರುಕಳಿಸಬಾರದು. ಬ್ಯಾಂಕ್ ಸಿಬ್ಬಂದಿ ಗ್ರಾಹಕರನ್ನು ಗೌರವದಿಂದ ನಡೆಸಿಕೊಳ್ಳಬೇಕು, ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಹಣಕಾಸು ಸಚಿವರು ಮತ್ತು ಹಣಕಾಸು ಸೇವೆಗಳ ಇಲಾಖೆ ಕ್ರಮ ಕೈಗೊಂಡು ಭಾಷೆ ಮತ್ತು ಸಂಸ್ಕೃತಿಯ ಸೂಕ್ಷ್ಮತೆಯನ್ನು ಬ್ಯಾಂಕ್ ಸಿಬ್ಬಂದಿ ಅರ್ಥಮಾಡಿಕೊಳ್ಳಲು ಎಲ್ಲಾ ಸಿಬ್ಬಂದಿಗೆ ಆಯಾ ರಾಜ್ಯಗಳ ಸ್ಥಳೀಯ ಭಾಷೆ ಬಗ್ಗೆ ತರಬೇತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.































































































error: Content is protected !!
Scroll to Top