ಕನ್ನಡಕ್ಕೆ ಮೊದಲ ಬೂಕರ್ ಕಿರೀಟ – ಬಾನು ಮುಷ್ತಾಕ್

ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಈಗಾಗಲೇ ಪಡೆದು ಹೆಮ್ಮೆಯಿಂದ ಬೀಗಿದೆ. ಅದರಲ್ಲಿ ಒಬ್ಬರೂ ಮಹಿಳೆ ಇಲ್ಲ ಎನ್ನುವ ಕೊರಗು ಒಂದೆಡೆ. ಹಾಗೆಯೇ ಶ್ರೀಮಂತವಾದ ಕನ್ನಡ ಸಾಹಿತ್ಯಕ್ಕೆ ಒಂದೇ ಒಂದು ಅಂತಾರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿಯು ಬಂದಿಲ್ಲ ಎಂಬ ಕೊರಗು ಇಂದು ನೀಗಿದೆ.

ಕನ್ನಡತಿ ಬಾನು ಮುಷ್ತಾಕ್ – ಸಿರಿಗನ್ನಡಕ್ಕೆ ಒಂದು ಗರಿ!
1948ರಲ್ಲಿ ಹಾಸನದಲ್ಲಿ ಹುಟ್ಟಿದ ಬಾನು ಶಿವಮೊಗ್ಗದಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಹೋಗಿ ಕನ್ನಡವನ್ನು ಓದಲು, ಬರೆಯಲು ಕಲಿತರು. ಅವರು 29ನೆಯ ವರ್ಷದವರೆಗೆ ಗಂಭೀರವಾಗಿ ಬರೆದವದಲ್ಲ. ಆದರೆ ಮೊದಲ ಹೆರಿಗೆಯ ನಂತರ ಅವರಲ್ಲಿ ಉಂಟಾದ ಖಿನ್ನತೆ ಮತ್ತು ಏಕತಾನತೆಗಳ ಪ್ರಭಾವದ ನಂತರ ಅವರು ಗಂಭೀರವಾಗಿ ಬರೆಯಲು ಆರಂಭ ಮಾಡಿದರು.

ಸಣ್ಣ ಕಥೆಗಳ ಸಾಮ್ರಾಜ್ಞಿ – ಬಾನು ಮುಷ್ತಾಕ್
ಅವರು ಕನ್ನಡದಲ್ಲಿ ಬರೆದ ಹಲವು ಪುಸ್ತಕಗಳು ತಮಿಳು, ಮಲಯಾಳಂ ಮತ್ತು ಉರ್ದು ಭಾಷೆಗಳಿಗೆ ಅನುವಾದ ಆಗಿ ಮುಂದೆ ಇಂಗ್ಲಿಷ್ ಭಾಷೆಗೆ ಕೂಡ ಅನುವಾದವಾದವು. ಅವರ ಸಣ್ಣ ಕಥೆಗಳನ್ನು ಇಂಗ್ಲಿಷ್ ಭಾಷೆಗೆ ಸೊಗಸಾಗಿ ಅನುವಾದ ಮಾಡಿದವರು ದೀಪಾ ಬಸ್ತಿ. ಒಂದು ದೀರ್ಘ ಕಾದಂಬರಿ, ನೂರಾರು ಪ್ರಬಂಧಗಳ ಸಂಕಲನ, ಕವನ ಸಂಕಲನ ಇವೆಲ್ಲವನ್ನೂ ಬಾನು ಮುಷ್ತಾಕ್ ಬರೆದಿದ್ದು ಹೆಸರು ಮಾಡಿದ್ದು ಮಾತ್ರ ಸಣ್ಣ ಕಥೆಗಳ ಕ್ಷೇತ್ರದಲ್ಲಿ. ಅವರು ಸಣ್ಣ ಕಥೆಗಳ ಆರು ಸಂಕಲನ ಈವರೆಗೆ ಹೊರತಂದಿದ್ದಾರೆ.

ಮಹಿಳಾಪರವಾದ ತೀವ್ರಗಾಮಿ ಚಿಂತನೆಗಳು
ಜನರು ಅವರ ಬರಹಗಳನ್ನು ಮೊದಲು ಓದಲು ಆರಂಭ ಮಾಡಿದ್ದು ಲಂಕೇಶ್ ಪತ್ರಿಕೆಯ ವರದಿಗಾರ್ತಿ ಆಗಿ. ನಂತರ ಅವರು ಆಕಾಶವಾಣಿಯಲ್ಲಿ ದೀರ್ಘ ಅವಧಿಗೆ ಕೆಲಸವನ್ನು ಮಾಡಿದರು. ಸ್ತ್ರೀಪರವಾದ ಮತ್ತು ಅಸಮಾನತೆ ವಿರುದ್ಧ ಅವರ ಚಿಂತನೆಗಳು ಅವರ ಬರಹಗಳಲ್ಲಿ ಎದ್ದುಕಾಣುವ ಅಂಶಗಳು. ಮಸೀದಿಗೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರವೇಶ ಕೊಡಬೇಕು ಎಂಬ ಹೋರಾಟದ ಕಾರಣಕ್ಕೆ ಅವರಿಗೆ ಅವರದ್ದೇ ಸಮಾಜ ಮೂರು ತಿಂಗಳು ಬಹಿಷ್ಕಾರ ಹಾಕಿದ್ದು, ಆಕೆ ನೋವು ಪಟ್ಟದ್ದು, ಮುಂದೆ ಕರ್ನಾಟಕದಲ್ಲಿ ಹಿಜಾಬ್ ವಿವಾದ ಭುಗಿಲೆದ್ದ ಸಂದರ್ಭ ಅವರು ಸಂತ್ರಸ್ತರಾದ ಹೆಣ್ಣು ಮಕ್ಕಳ ಪರವಾಗಿ ಧ್ವನಿಯನ್ನು ಎತ್ತಿದ್ದು, ಅದೇ ರೀತಿಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ಗಟ್ಟಿಯಾದ ಧ್ವನಿಯಲ್ಲಿ ಮಾತಾಡಲು ತೊಡಗಿದ್ದು…ಇವೆಲ್ಲವೂ ಬಾನು ಅವರ ಹೋರಾಟದ ಬೇರೆ ಬೇರೆ ಮುಖಗಳು.

HEART LAMP – ಮಾನವೀಯ ಅಂತಃಕರಣದ ಸಣ್ಣ ಕತೆಗಳು
ಈ ಬಾರಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದ ಪುಸ್ತಕ ಇದು. ಇದರಲ್ಲಿ ಸ್ತ್ರೀ ಶೋಷಣೆಯ ವಿರುದ್ಧ ಹೋರಾಟದ ಮುಖಗಳಿವೆ. 12 ಸಣ್ಣ ಕಥೆಗಳು ಅಡಕವಾಗಿರುವ ಈ ಕಥಾ ಸಂಕಲನವನ್ನು ಸೊಗಸಾಗಿ ದೀಪಾ ಬಸ್ತಿ ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿದ್ದಾರೆ. ಕತೆಗಳ ಉದ್ದಕ್ಕೂ ಓದುಗರನ್ನು ಕಾಡುವ ಮಾನವೀಯ ಅಂತಃಕರಣದ ಜಿನುಗು ಇದೆ. ಅವರ ಕರಿನಾಗರಗಳು ಎಂಬ ಸಣ್ಣ ಕತೆಯ 2003ರಲ್ಲಿ ಹಸೀನಾ ಎಂಬ ಕನ್ನಡ ಸಿನೆಮಾ ಆದದ್ದು, ಅದು ಮುಂದೆ ರಾಷ್ಟ್ರಪ್ರಶಸ್ತಿಯನ್ನು ಪಡೆದದ್ದು ಎಲ್ಲರಿಗೂ ಗೊತ್ತಿದೆ. ಅವರ ಎಲ್ಲ ಕಥೆಗಳನ್ನೂ ಅನುವಾದ ಮಾಡುವ ಕೆಲಸಕ್ಕೆ ದೀಪಾ ಬಸ್ತಿ ಎರಡು ವರ್ಷ ತೆಗೆದುಕೊಂಡರು ಅಂದರೆ ಅವರೂ ಗ್ರೇಟ್ ಆಗಿರಬೇಕು.

ಏನಿದ್ದರೂ ಬಾನು ಮುಷ್ತಾಕ್ ಸಾಧನೆಗೆ ಕನ್ನಡಕ್ಕೆ ಒಂದು ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿದೆ ಎಂದಾದರೆ ಅದು ಸಣ್ಣ ಸಂಗತಿ ಅಲ್ಲ.































































































error: Content is protected !!
Scroll to Top