ಆರ್‌ಸಿಬಿ – ಕೆಕೆಆರ್ ತಂಡಗಳು ಮುಖಾಮುಖಿ
ಬೆಂಗಳೂರು : ಭಾರತ ಮತ್ತ ಪಾಕಿಸ್ತಾನ ನಡುವಿನ ಯುದ್ಧದಿಂದಾಗಿ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಪಂದ್ಯ ಇಂದಿನಿಂದ ಪುನರಾರಂಭವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕೊತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಮುಖಾಮಖಿಯಾಗಲಿದೆ. ಇತ್ತೀಚೆಗೆ ಟೆಸ್ಟ್ ಮಾದರಿಗೆ ನಿವೃತ್ತಿ ಹೇಳಿರುವ ಬ್ಯಾಟಿಂಗ್ ತಾರೆ ವಿರಾಟ್ ಕೊಹ್ಲಿ ಪಂದ್ಯದ ಮುಖ್ಯ ಭೂಮಿಕೆಯಾಗಿದ್ದಾರೆ.
ಆರ್‌ಸಿಬಿ ಪ್ಲೇಆಫ್ ಪ್ರವೇಶಕ್ಕೆ ಕ್ಷಣಗಣನೆ
ಸದ್ಯ ನಡೆದಿರುವ 11 ಪಂದ್ಯಗಳಲ್ಲಿ 8 ಜಯ, 3 ಸೋಲು ಕಂಡಿರುವ ಆರ್‌ಸಿಬಿ +0.482 ನೆಟ್ ರನ್ ರೇಟ್‌ನೊಂದಿಗೆ 16 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಇಷ್ಟೇ ಅಂಕಗಳನ್ನು ಹೊಂದಿರುವ ಗುಜರಾತ್ ಟೈಟನ್ಸ್ +0.793 ಉತ್ತಮ ರನ್ ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. ಆರ್‌ಸಿಬಿಯು ಇಂದಿನ ಪಂದ್ಯವನ್ನು ಗೆದ್ದರೆ 18 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡ ಎನಿಸಲಿದೆ.

ಅತ್ತ 12 ಪಂದ್ಯಗಳನ್ನಾಡಿರುವ ಕೋಲ್ಕೊತಾ ನೈಟ್ ರೈಡರ್ಸ್, 11 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಪ್ಲೇಆಫ್ ಸ್ಪರ್ಧೆಯನ್ನು ಜೀವಂತವಾಗಿಟ್ಟುಕೊಳ್ಳಬೇಕಾದರೆ 3 ಬಾರಿಯ ಚಾಂಪಿಯನ್ ಕೆಕೆಆರ್ ಗೆಲ್ಲುವುದು ಅನಿವಾರ್ಯ. ಒಂದು ವೇಳೆ ಸೋತರೆ ಪ್ಲೇಆಫ್ ಸ್ಪರ್ಧೆಯಿಂದ ನಿರ್ಗಮಿಸುವ ನಾಲ್ಕನೇ ತಂಡವಾಗಲಿದೆ. ಹಾಗಾಗಿ ಇಂದಿನ ಪಂದ್ಯ ತಂಡಕ್ಕೆ ‘ಮಾಡು ಇಲ್ಲವೇ ಮಡಿ’ ಎನಿಸಿದೆ.















































