ಕಾರ್ಕಳ : 19ನೇ ಶತಮಾನದ ಸಾಮಾಜಿಕ ಸುಧಾರಕಿ, ಶಿಕ್ಷಣ ತಜ್ಞೆ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಪಂಡಿತ್ ರಮಾಬಾಯಿ ಅವರ ಜನ್ಮದಿನಾಚರಣೆ ಅಂಗವಾಗಿ ಏ. 23ರಂದು ವಿಷ್ಣು ಡೋಂಗ್ರೆ ಹಾಗೂ ಯೋಗೀಶ್ ಚಿಪ್ಳೂಣಕರ್ ಅವರ ಪ್ರಾಯೋಜಕತ್ವದಲ್ಲಿ ಮಾಳ ಗ್ರಾಮದ ಮಲ್ಲಾರಿನಲ್ಲಿ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಿತು.
ಪುತ್ಥಳಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಬರ್ನಾಬಸ್ ಎ. ಗೂಡೆ, ರಮಾಬಾಯಿಯವರು ಭಾರತದಲ್ಲಿ ಮಹಿಳೆಯರ ಸ್ಥಿತಿಗತಿ ಸುಧಾರಿಸಿದ ಮಹತ್ವದ ವ್ಯಕ್ತಿತ್ವ. ಅವರು ಸರಸ್ವತಿ ಪುತ್ರಿ. ಅವರ ಹೋರಾಟ ಪ್ರಸ್ತುತ ಸಮಾಜಕ್ಕೆ ಮಾದರಿ ಎಂದರು.
ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಉಪನ್ಯಾಸಕ ಗೋಪಾಲ್ ಮರಾಠೆ ಮಾತನಾಡಿ, ರಮಾಬಾಯಿ ಅವರ ಪುತ್ಥಳಿ ಇರುವ ಈ ಸ್ಥಳಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿರುವುದರಿಂದ ಮುಂದಿನ ಪೀಳಿಗೆಗೆ ಸ್ಪೂರ್ತಿ ಕೇಂದ್ರವಾಗಲಿ ಎಂದು ಹೇಳಿದರು. ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಪೂಜಾರಿ ಮಾತನಾಡಿ, ಈ ಸ್ಥಳವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿಸುವ ನಿಟ್ಟಿನಲ್ಲಿ ಪಂಚಾಯತ್ ವತಿಯಿಂದ ಪ್ರಯತ್ನಿಸಲಾಗುವು ಎಂದರು.
ಆಯುರ್ವೇದ ವೈದ್ಯ ಸತ್ಯನಾರಾಯಣ ಭಟ್, ವಿಶ್ರಾಂತ ತಹಸಿಲ್ದಾರ್ ಶಾಂತರಾಮ ಚಿಪ್ಳೂಣಕರ್, ಹರಿಹರ ಗೋಖಲೆ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಗೋಪಾಲ ಮರಾಠೆ ಪ್ರಾರ್ಥಿಸಿದರು, ಮೋಹನ್ ಚಿಪ್ಳೂಣಕರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.




































