ಬೀಡಿ ಕಾರ್ಮಿಕರ ವೇತನ ಕಡಿತ ವಿರೋಧಿಸಿ ಕಾರ್ಕಳದಲ್ಲಿ ಪ್ರತಿಭಟನೆ

ಕಾರ್ಕಳ : ಬೀಡಿ ಕಾರ್ಮಿಕರ ಹಿತದೃಷ್ಟಿಯಿಂದ ಪ್ರತಿ 1 ಸಾವಿರ ಬೀಡಿಗೆ 395 ರೂ. ಕನಿಷ್ಟ ವೇತನ ನಿಗದಿಪಡಿಸಿ ಸರಕಾರ ಹೊಸ ಆದೇಶ ಹೊರಡಿಸಬೇಕೆಂದು ತಾಲೂಕು ಬೀಡಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್. ಕಾಂಚನ್ ಒತ್ತಾಯಿಸಿದರು.
ಅವರು ಎ. 11ರಂದು ಬೀಡಿ ಕಾರ್ಮಿಕರ ವೇತನ ಕಡಿತಗೊಳಿಸಿ ಸರಕಾರ ಹೊರಡಿಸಿರುವ ಹೊಸ ಆದೇಶ ವಿರೋಧಿಸಿ ಭಾರತೀಯ ಕಾರ್ಮಿಕ ಸಂಘಗಳ ಕೇಂದ್ರ (CITU) ನೇತೃತ್ವದಲ್ಲಿ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಬೀಡಿ ಕಾರ್ಮಿಕರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

ಜನಪ್ರತಿನಿಧಿಗಳಿಗೆ ಬೀಡಿ ಕಾರ್ಮಿಕರೆಂದರೆ ಒಂದು ರೀತಿಯ ತಾತ್ಸಾರ. ಇಡೀ ರಾಜ್ಯದಲ್ಲಿ ಸುಮಾರು 7 ಲಕ್ಷಕ್ಕೂ ಅಧಿಕ ಬೀಡಿ ಕಾರ್ಮಿಕರಿದ್ದಾರೆ. ಇವರಲ್ಲಿ ಉಡುಪಿ, ದ.ಕ. ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ, ಈ ಭಾಗದ ಯಾವುದೇ ಶಾಸಕರು ಬೀಡಿ ಕಾರ್ಮಿಕರ ಸಮಸ್ಯೆ ಬಗ್ಗೆ ಸದನದಲ್ಲಿ ಧ್ವನಿ ಎತ್ತಲ್ಲ. ಇದು ಬೇಸರದ ಸಂಗತಿ ಎಂದವರು ಹೇಳಿದರು.
ಕಾರ್ಕಳ ಹೆಬ್ರಿ ವ್ಯಾಪ್ತಿಯಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಬೀಡಿ ಕಾರ್ಮಿಕರಿದ್ದಾರೆ. ಆದರೆ, ಅವರ ಸಮಸ್ಯೆ ಬಗ್ಗೆ ಕ್ಷೇತ್ರದ ಶಾಸಕರಾದ ಸುನಿಲ್‌ ಕುಮಾರ್‌ ಅವರು ಅಧಿವೇಶನದಲ್ಲಿ ಮಾತನಾಡದಿರುವುದು ವಿಷಾದನೀಯ ಎಂದ ಕವಿರಾಜ್ ಈ ಬಾರಿ‌ ಸರಕಾರವು ಶಾಸಕರ, ಮಂತ್ರಿಗಳ ಸಂಬಳ ಹೆಚ್ಚಳ ಮಾಡಿದೆ. ಆದರೆ, ಬೀಡಿ ಕಾರ್ಮಿಕರಿಗೆ ಸಾವಿರ ಬೀಡಿಗೆ 395 ರೂ. ನಿಗದಿ ಪಡಿಸಲು ಅವರಿಂದ ಸಾಧ್ಯವಿಲ್ಲ. ಅವರು ಬೀಡಿ ಮಾಲಕರೊಂದಿಗೆ ಒಪ್ಪಂದ ಮಾಡಿಕೊಂಡು ಇದ್ದ ವೇತನವನ್ನು ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದರು.

ಗ್ರಾಚ್ಯುವಿಟಿ ಹಣ ನೀಡಬೇಕು
ಬೀಡಿ ಕಾರ್ಮಿಕರು ಕೆಲಸ ಬಿಡುವಾಗ ಬೀಡಿ ಮಾಲಕರು ಕಾನೂನು ಬದ್ದವಾಗಿ ನೀಡಬೇಕಾದ ಗ್ರಾಚ್ಯುವಿಟಿ ಹಣವನ್ನು ನೀಡದೇ ವಂಚಿಸುತ್ತಿರುವುದರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಈ ಮೂಲಕ ಬೀಡಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕಿದೆ. ಅಲ್ಲದೆ ಬೀಡಿ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಮೂಲಕ ಸಿಗಬೇಕಾದ ಆರೋಗ್ಯ ಸಹಾಯ, ಮನೆ ಸಹಾಯ ಹಾಗೂ ವಿದ್ಯಾರ್ಥಿವೇತನ ದೊರೆಯುವಂತೆ ಕ್ರಮವಹಿಸಬೇಕಿದೆ ಎಂದರು.

ಜಿ.ಎಸ್.ಟಿ.ರೂಪದಲ್ಲಿ ಸಂಗ್ರಹವಾಗುವ ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಯ ಪಾಲಿನ ಸೆಸ್ ಪಾಲನ್ನು ತಕ್ಷಣ ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಗೆ ನೀಡಿ ಕಾರ್ಮಿಕರಿಗೆ ಸವಲತ್ತು ಒದಗಿಸಬೇಕು. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಒತ್ತಡ ಹೇರಬೇಕಿದೆ ಎಂದು ಕವಿರಾಜ್‌ ಹೇಳಿದರು.

ಆದೇಶ ಪ್ರತಿ ಸುಟ್ಟು ಆಕ್ರೋಶ
ಪ್ರತಿಭಟನೆಯ ವೇಳೆ ಸರಕಾರ ಪ್ರತಿ ಸಾವಿರ ಬೀಡಿಯ ವೇತನವನ್ನು 331 ರೂ. ಯಿಂದ ಕಡಿತಗೊಳಿಸಿ 270 ರೂ. ಎಂದು ನಿಗದಿ ಪಡಿಸಿ ಹೊರಡಿಸಿರುವ ಸರಕಾರದ ಆದೇಶದ ಪ್ರತಿಯನ್ನು ಸುಟ್ಟು ಹಾಕಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರರಿಗೆ ಮನವಿ
ಸರಕಾರ ಈಗ ಹೊರಡಿಸಿರುವ ಆದೇಶವನ್ನು ಹಿಂಪಡೆದು ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಟ ವೇತನ ನಿಗದಿ ಪಡಿಸಿ ಹೊಸ ಆದೇಶವನ್ನು ಹೊರಡಿಸಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು ಕಾರ್ಕಳ ತಹಶೀಲ್ದಾರ್‌ ಪ್ರದೀಪ್‌ ಆರ್.‌ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಮನವಿ ಪತ್ರ

ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಉಪಾಧ್ಯಕ್ಷೆ ಬಲ್ಕಿಸ್, ಜಿಲ್ಲಾ ಕಾರ್ಯದರ್ಶಿ ಉಮೇಶ್ ಕುಂದರ್, ಉಡುಪಿ ಬೀಡಿ & ಟೊಬ್ಯಾಕೊ ಲೇಬರ್ ಯೂನಿಯನ್ ಅ‌ಧ್ಯಕ್ಷೆ ನಳಿನಿ ಎಸ್., ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷೆ ಸುನಿತಾ ಶೆಟ್ಟಿ, ಕೋಶಾಧಿಕಾರಿ ಸುಮತಿ, ಶಕುಂತಲಾ, ಸುಮಿತ್ರಾ, ಪುಷ್ಪಾವತಿ, ಪ್ರತಿಮಾ ಸೇರಿದಂತೆ ಬೀಡಿ ಕಾರ್ಮಿಕರು ಉಪಸ್ಥಿತರಿದ್ದರು.









error: Content is protected !!
Scroll to Top