ಮೀನುಗಾರರ ಪ್ರತಿಭಟನೆಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪ ಹೊರಿಸಿ ಕೇಸ್ ದಾಖಲಿಸಿದ ಪೊಲೀಸರು
ಉಡುಪಿ : ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಿನ್ನೆ ನಡೆದ ಪ್ರತಿಭಟನೆ ಸಂದರ್ಭ ಪ್ರಮೋದ್ ಮಧ್ವರಾಜ್ ದ್ವೇಷ ಹರಡುವ ಭಾಷಣ ಮಾಡಿದ್ದಾರೆ ಎಂದು ಪೊಲೀಸರು ಸುಮೋಟೊ ಕೇಸು ದಾಖಲಿಸಿದ್ದು, ಇದು ಕಾಂಗ್ರೆಸ್‌ನ ಒತ್ತಡದಿಂದ ದಾಖಲಿಸಿದ ಕೇಸ್ ಎಂದು ಶಾಸಕ ಯಶ್‌ಪಾಲ್ ಸುವರ್ಣ ಆರೋಪಿಸಿದ್ದಾರೆ.
ಮೀನು ಕದ್ದ ಪ್ರಕರಣದಲ್ಲಿ ಐವರು ಮೀನುಗಾರರ ಮೇಲೆ ಪೊಲೀಸರು ಅಟ್ರಾಸಿಟಿ ಕೇಸ್ ಹಾಕಿದ್ದರು. ಇದನ್ನು ಖಂಡಿಸಿ ಮಲ್ಪೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ, ಮೊಗವೀರ ಮುಖಂಡ ಪ್ರಮೋದ್ ಮಹಿಳೆಯನ್ನು ಕಟ್ಟಿಹಾಕಿ ಎರಡು ಏಟು ಕೊಟ್ಟದ್ದನ್ನು ಸಮರ್ಥಿಸಿದ್ದರು. ಕಳ್ಳರನ್ನು ಕಟ್ಟಿ ಹಾಕಲೇಬೇಕು. ಮಚ್ಚಿನಲ್ಲಿ, ಖಡ್ಗದಲ್ಲಿ, ತಲೆವಾರಿನಲ್ಲಿ ಹೊಡೆದಿದ್ದಾ? ಎರಡು ಕೆನ್ನೆಗೆ ಬಾರಿಸಿದ್ದಾರೆ ಅಷ್ಟೇ ಎಂದಿದ್ದರು.
ಈ ಹೇಳಿಕೆ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸರು ಅವರ ವಿರುದ್ಧ ದ್ವೇಷ ಭಾವನೆಯಿಂದ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಬಿಎನ್‌ಎಸ್ 57, 191 (1)192 ನಂತೆ ಪ್ರಕರಣ ದಾಖಲಿಸಿದ್ದಾರೆ. ಸಾರ್ವಜನಿಕವಾಗಿ ಕಟ್ಟಿಹಾಕಿದ್ದು ಸರಿ ಎಂಬುದನ್ನು ಮಧ್ವರಾಜ್ ಸಮರ್ಥಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನು ಖಂಡಿಸಿರುವ ಯಶ್‌ಪಾಲ್ ಸುವರ್ಣ ಕಾಂಗ್ರೆಸ್‌ನವರ ಒತ್ತಡಕ್ಕೆ ಮಣಿದು ಪೊಲೀಸರು ವಿನಾಕಾರಣ ಸ್ವಯಂ ಪ್ರೇರಣೆಯಿಂದ ಕೇಸ್ ದಾಖಲಿಸಿಕೊಂಡಿದ್ದಾರೆ. ಉಡುಪಿ ಪೊಲೀಸರು ಕಾಂಗ್ರೆಸ್ ನಾಯಕರ ಕೈಗೊಂಬೆಗಳಂತೆ ಕುಣಿಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಿರ್ದೇಶನದಂತೆ ಮಹಿಳಾ ಮೀನುಗಾರರ ಮೇಲೆ ದಲಿತ ದೌರ್ಜನ್ಯ ಕಾಯಿದೆಯಡಿ ಕೇಸ್ ದಾಖಲಿಸಿದ ಪೊಲೀಸರ ಲೋಪವನ್ನು ಪ್ರಶ್ನಿಸಿದ ಮಾಜಿ ಸಚಿವರ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡು ಮೀನುಗಾರರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗುತ್ತದೆ. ಕರಾವಳಿ ಜಿಲ್ಲೆಯ ಮೀನುಗಾರರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರಕಾರದ ಕೈಗೊಂಬೆಯಾಗಿ ಪೊಲೀಸ್ ಇಲಾಖೆ ವರ್ತಿಸುತ್ತಿರುವುದು ತೀರಾ ಖಂಡನಾರ್ಹ. ಪೊಲೀಸರು ಪದೇಪದೆ ಮೀನುಗಾರರ ತಾಳ್ಮೆ ಪರೀಕ್ಷೆ ಮಾಡುತ್ತಿದ್ದು, ಜಿಲ್ಲೆಯ ಪ್ರಜ್ಞಾವಂತ ಜನ ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.



















