ಅನೇಕ ಸಂದರ್ಭಗಳಲ್ಲಿ ಕ್ರಿಮಿನಲ್ ಘಟನೆಗಳಿಗೆ ಸಂಬಂಧಪಟ್ಟಂತೆ ಅಪರಾಧಗಳಲ್ಲಿ ಭಾಗಿಯಾದ ವ್ಯಕ್ತಿಗಳ ಪತ್ತೆಗಾಗಿ ಪೊಲೀಸ್ ತನಿಖಾಧಿಕಾರಿಯು ಅಪರಾಧ ನಡೆದ ಸ್ಥಳದಲ್ಲಿ ಲಭ್ಯವಾಗುವ ಕೆಲವು ಭೌತಿಕ ಸುಳಿವುಗಳನ್ನು ತಜ್ಞರ ನೆರವಿನೊಂದಿಗೆ ವೈಜ್ಞಾನಿಕವಾಗಿ ಸಂಗ್ರಹಿಸಬೇಕಾಗುತ್ತದೆ. ಇವುಗಳ ಪೈಕಿ ಘಟನೆ ನಡೆದ ಸ್ಥಳದಲ್ಲಿ ಸಾಮಾನ್ಯವಾಗಿ ಲಭ್ಯವಿರಬಹುದಾದ ಅಪರಾಧಿಯ ಕೈಬೆರಳು, ಹೆಜ್ಜೆ ಗುರುತು ಮತ್ತು ಪಾದ ಮುದ್ರೆ ಇವುಗಳು ಅಪರಾಧಿಗಳ ಪತ್ತೆಯ ವಿಚಾರವಾಗಿ ಲಭಿಸುವ ಅತ್ಯಂತ ಪ್ರಮುಖವಾದ ಭೌತಿಕ ಸುಳಿವುಗಳ ಪೈಕಿ ಒಂದಾಗಿರುತ್ತದೆ. ಪ್ರತಿಯೊಬ್ಬ ಮಾನವನ ಕೈಬೆರಳಚ್ಚುಗಳು ವಿಭಿನ್ನವಾಗಿರುತ್ತದೆ ಮತ್ತು ಒಬ್ಬನ ಕೈಬೆರಳಚ್ಚು ಇನ್ನೊಬ್ಬನ ಕೈಬೆರಳಚ್ಚಿಗೆ ಹೋಲಿಕೆ ಇರುವುದಿಲ್ಲ. ಈ ಕಾರಣದಿಂದ ಕ್ರಿಮಿನಲ್ ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸ್ ತನಿಖಾಧಿಕಾರಿಯು ತುರ್ತಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಘಟನಾ ಸ್ಥಳವನ್ನು ಮತ್ತು ಅಲ್ಲಿ ಲಭ್ಯವಿರುವ ಎಲ್ಲಾ ವಸ್ತುಗಳನ್ನು ಸೂಕ್ಷ್ಮವಾಗಿ ಮತ್ತು ವೈಜ್ಞಾನಿಕವಾಗಿ ಗಮನಿಸಿ ಒಂದು ವೇಳೆ ಘಟನಾ ಸ್ಥಳದಲ್ಲಿ ಅಥವಾ ಅಲ್ಲಿ ಲಭ್ಯವಿರುವ ಯಾವುದೇ ವಸ್ತುವಿನ ಮೇಲೆ ಬೆರಳಚ್ಚು ಅಥವಾ ಹೆಜ್ಜೆಯ ಗುರುತು ಕಂಡು ಬಂದಲ್ಲಿ ಅಂತಹ ಗುರುತುಗಳು ಹಾಳಾಗದಂತೆ ರಕ್ಷಿಸಿ ಬೆರಳಚ್ಚು ತಜ್ಞರನ್ನು ಕರೆಸಿಕೊಂಡು ಆ ಗುರುತನ್ನು ಅಪರಾಧದಲ್ಲಿ ಭಾಗಿಯಾದ ಅಪರಾಧಿಯ ಪತ್ತೆಗಾಗಿ ಮತ್ತು ಆತ ನಡೆಸಿದ ಅಪರಾಧವನ್ನು ವೈಜ್ಞಾನಿಕವಾಗಿ ಮತ್ತು ತಾಂತ್ರಿಕ ನೆರವಿನೊಂದಿಗೆ ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಉಪಯೋಗಿಸಿಕೊಳ್ಳಬಹುದು. ಅಪರಾಧ ನಡೆದ ಕೂಡಲೇ ಪೊಲೀಸ್ ಅಧಿಕಾರಿಗಳೊಂದಿಗೆ ಬೆರಳಚ್ಚು ತಜ್ಞರು ಸ್ಥಳಕ್ಕೆ ಬಂದಾಗ ಸ್ಥಳದಲ್ಲಿ ಇರುವಂತಹ ಕೈಬೆರಳಿನ ಅಥವಾ ಹೆಜ್ಜೆಯ ಗುರುತನ್ನು ಕಂಡುಹಿಡಿಯಲು ಗುರುತು ಇರುವ ಜಾಗಕ್ಕೆ ರಾಸಾಯನಿಕ ವಸ್ತುವಿನ ಪುಡಿಯನ್ನು ಹಾಕಿ ಲಭ್ಯವಿರುವ ಗುರುತುಗಳು ಸುಲಭವಾಗಿ ಗೋಚರಿಸುವಂತೆ ನೋಡಿಕೊಳ್ಳುತ್ತಾರೆ. ಆನಂತರ ಆ ಗುರುತುಗಳನ್ನು ಕ್ಯಾಮೆರಾ ಮೂಲಕ ಸೆರೆಹಿಡಿಯಬಹುದು ಅಥವಾ ಸೆಲ್ಲೋಪಿನ್ ಟೇಪ್ ಮೇಲೆ ವರ್ಗಾಯಿಸಬಹುದು. ಈ ರೀತಿಯಾಗಿ ಅಪರಾಧ ನಡೆದ ಸ್ಥಳದಲ್ಲಿ ಲಭಿಸುವ ಬೆರಳಚ್ಚು ಮತ್ತು ಹೆಜ್ಜೆಯ ಗುರುತುಗಳನ್ನು ಲೇಟೆಂಟ್ ಪ್ರಿಂಟಿಂಗ್ ಎನ್ನುತ್ತಾರೆ. ಸಾಮಾನ್ಯವಾಗಿ ಇಂತಹ ಗುರುತುಗಳು ಸಂಪೂರ್ಣ ಮತ್ತು ಸ್ಪಷ್ಟವಾಗಿ ಇರುವುದಿಲ್ಲ. ಯಾಕೆಂದರೆ, ಅಪರಾಧಿಯು ಯಾವುದಾದರೂ ಒಂದು ವಸ್ತುವನ್ನು ಮುಟ್ಟಿದ ಸಂದರ್ಭದಲ್ಲಿ ಅಲ್ಲಿ ಮೂಡುವಂತಹ ಬೆರಳಿನ ಗುರುತುಗಳು ಭಾಗಶಃವಾಗಿ ಮೂಡಿರುತ್ತದೆ. ಆನಂತರ ಅದನ್ನು ಪ್ರಯೋಗಾಲಯದಲ್ಲಿ ವೈಜ್ಞಾನಿಕ ವಿಶ್ಲೇಷಣೆ ಮೂಲಕ ಪರಿಶೀಲಿಸಿ ಘಟನಾ ಸ್ಥಳದಲ್ಲಿ ಲಭಿಸಿದ ಬೆರಳಚ್ಚು ಯಾವ ರೀತಿಯದ್ದು ಎಂದು ಪತ್ತೆ ಮಾಡಲಾಗುತ್ತದೆ. ಕ್ರಿಮಿನಲ್ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಅಪರಾಧಿಯನ್ನು ಬಂಧಿಸಿದಾಗ ಕಡ್ಡಾಯವಾಗಿ ಆತನ ಬೆರಳಚ್ಚನ್ನು ಪಡೆದು ತಮ್ಮ ಕಡತದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಬಂಧಿತನ ಬೆರಳುಗಳನ್ನು ಇಂಕ್ಪ್ಯಾಡ್ ಮೇಲೆ ಇಟ್ಟು ಆತನ ಎಲ್ಲಾ ಕೈ ಬೆರಳುಗಳ ಗುರುತನ್ನು ಕಾಗದದ ಮೇಲೆ ವರ್ಗಾಯಿಸಿ ಕಡತದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಈ ರೀತಿಯಾಗಿ ಪಡೆದ ಗುರುತುಗಳಿಗೆ ಏಕ್ಸಂಫ್ಲರ್ ಗುರುತುಗಳು ಎನ್ನುತ್ತಾರೆ. ಅಪರಾಧ ನಡೆದ ಸ್ಥಳದಲ್ಲಿ ಸಿಕ್ಕ ಬೆರಳಚ್ಚಿನ ಗುರುತುಗಳನ್ನು ಪೊಲೀಸ್ ಕಡತದಲ್ಲಿ ಇರುವ ಗುರುತುಗಳಿಗೆ ತಾಳೆ ಹಾಕಿ ನೋಡಿದಾಗ ಅಪರಾಧ ನಡೆಸಿದ ವ್ಯಕ್ತಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಹಿಂದಿನ ಕಾಲದಲ್ಲಿ ಬೆರಳಚ್ಚು ತಜ್ಞರು ಅಪರಾಧ ಸ್ಥಳದಲ್ಲಿ ಸಿಕ್ಕ ಲೇಟೆಂಟ್ ಗುರುತುಗಳನ್ನು ಏಕ್ಸಂಫ್ಲರ್ ಗುರುತುಗಳ ಜೊತೆ ಎರಡು ಮೂರು ಬೇರೆ ರೀತಿಯ ವರ್ಗೀಕರಣ ಪದ್ಧತಿಗಳ ಮೂಲಕ ತಾಳೆ ಹಾಕುತ್ತಿದ್ದ ಕಾರಣ ಇದಕ್ಕೆ ಸಾಕಷ್ಟು ಸಮಯ ತಗಲುತ್ತಿತ್ತು. ಆದರೆ, ಇತ್ತೀಚಿಗಿನ ದಿನಗಳಲ್ಲಿ ಏಕ್ಸಂಫ್ಲರ್ ಗುರುತುಗಳನ್ನು ಕಂಪ್ಯೂಟರೀಕರಣಗೊಳಿಸಿರುವುದರಿಂದ ಹಾಗೂ ಕಂಪ್ಯೂಟರ್ ಬೆರಳಚ್ಚುಗಳನ್ನು ಹೋಲಿಕೆ ಮಾಡುವ ಸಾಫ್ಟ್ವೇರ್ ಅಳವಡಿಸಿರುವುದರಿಂದ ಕ್ಷಣಾರ್ಧದಲ್ಲಿ ಸಾವಿರಾರು ಗುರುತುಗಳನ್ನು ತಾಳೆ ಹಾಕಿ ನೋಡಬಹುದಾಗಿದೆ.
ಪೊಲೀಸ್ ಕಡತಗಳಲ್ಲಿ ಅಪರಾಧ ಮಾಡಿ ಸಿಕ್ಕಿ ಹಾಕಿಕೊಂಡ ಅಪರಾಧಿಯ ಬೆರಳಚ್ಚಿನ ಕುರಿತು ದಾಖಲೆ ಇರುವುದರಿಂದ ಯಾವುದೇ ವ್ಯಕ್ತಿ ಮೊದಲ ಬಾರಿಗೆ ಅಪರಾಧ ಮಾಡಿ ಆತನ ಬೆರಳಚ್ಚು ಅಪರಾಧ ನಡೆದ ಸ್ಥಳದಲ್ಲಿ ಲಭಿಸಿದರೂ ಕೂಡ ಅಪರಾಧಿಯ ಗುರುತು ಹಚ್ಚುವುದು ಕಷ್ಟವಾಗುತ್ತಿತ್ತು. ಆದರೆ ಇತ್ತೀಚಿಗೆ ಭಾರತದ ಪ್ರತಿಯೊಬ್ಬ ನಾಗರಿಕರಿಗೆ ವಿಶಿಷ್ಠ ಗುರುತಿನ ಚೀಟಿ ನೀಡುವಂತಹ ಪದ್ಧತಿ ಜಾರಿಯಲ್ಲಿರುವುದರಿಂದ ಮತ್ತು ದೇಶದ ಎಲ್ಲಾ ನಾಗರಿಕರ ಬೆರಳಚ್ಚು ಗುರುತುಗಳು ಗಣಕೀಕರಣವಾಗಿರುವುದರಿಂದ ಕ್ರಿಮಿನಲ್ ಕೃತ್ಯದ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿ ಲಭಿಸುವ ಬೆರಳಚ್ಚಿನ ಸಹಾಯದಿಂದ ಅಪರಾಧಿಯನ್ನು ಪತ್ತೆಹಚ್ಚುವ ಕಾರ್ಯ ಸುಲಭವಾಗಿರುತ್ತದೆ. ಅಪರಾಧದ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿ ಲಭಿಸುವ ಪಾದದ ಮುದ್ರೆಗಳು ಅಪರಾಧಿಯು ಘಟನೆಯ ಸ್ಥಳಕ್ಕೆ ಬಂದ ಹಾಗೂ ನಿರ್ಗಮಿಸಿದ ಬಗ್ಗೆ ದಾರಿಯನ್ನು ಸಾಬೀತುಪಡಿಸುತ್ತದೆ. ಆದರೆ, ಪಾದ ಮುದ್ರೆಗಳ ಸಂಬಂಧದ ಸಾಕ್ಷ್ಯವು ಕೈ ಬೆರಳು ಮುದ್ರೆಯ ಸಂಬಂಧದ ಸಾಕ್ಷ್ಯಕ್ಕಿಂತ ಕಡಿಮೆ ಮೌಲ್ಯವನ್ನು ಹೊಂದಿರುತ್ತದೆ. ಒಬ್ಬ ವ್ಯಕ್ತಿಯು ನಿಧಾನವಾಗಿ ಅಥವಾ ವೇಗವಾಗಿ ನಡೆಯುವಾಗ, ಓಡುವಾಗ ಮತ್ತು ಜಿಗಿಯುವಾಗ ಪಾದದ ಗುರುತುಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಅಲ್ಲದೇ ಒಬ್ಬ ವ್ಯಕ್ತಿಯ ಪಾದದ ಗುರುತುಗಳು ಆತ ಗಣನೀಯವಾದ ದೂರವನ್ನು ಕ್ರಮಿಸಿದ ನಂತರ ಮತ್ತು ವಿಶ್ರಾಂತಿಯಲ್ಲಿರುವಾಗ ವ್ಯತ್ಯಾಸದಿಂದ ಕೂಡಿರುತ್ತದೆ.































































