ತಡೆಗೋಡೆ ವಿಸ್ತರಣೆ ಸೇರಿದಂತೆ ಸಾರ್ವಜನಿಕರಾಗುತ್ತಿರುವ ಸಮಸ್ಯೆಯನ್ನು ಶೀಘ್ರ ಬಗೆಹರಿಸುವುದಾಗಿ ಭರವಸೆ
ಕಾರ್ಕಳ : ಸಾಣೂರು ರಾಷ್ಟ್ರೀಯ ಹೆದ್ದಾರಿ 169 ನಿರ್ಮಾಣ ಕಾಮಗಾರಿಯಿಂದ ಜನತೆಗೆ ಆಗುತ್ತಿರುವ ಸಮಸ್ಯೆಯ ಕುರಿತಂತೆ ಸಾರ್ವಜನಿಕರ ದೂರಿನ ಹಿನ್ನೆಲೆ ಜ. 3ರಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿದರು. ಪುಲ್ಕೇರಿ ಬೈಪಾಸ್ ಸರ್ಕಲ್‌ನಿಂದ ಮುರತ್ತಂಗಡಿ ಪದವಿ ಪೂರ್ವ ಕಾಲೇಜುವರೆಗೆ ಸುಮಾರು 4 ಕಿ. ಮೀ. ರಸ್ತೆ ಕಾಮಗಾರಿಯಿಂದಾಗುತ್ತಿರುವ ತೊಡಕುಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು ರಾ.ಹೆ. ಯೋಜನಾಧಿಕಾರಿ ಜಾವೇದ್ ಅಜ್ಮಿ, ಇಂಜಿನಿಯರ್ ನಾಸಿರ್, ದಿಲೀಪ್ ಬಿಲ್ಡ್ ಕಾನ್ ಜನರಲ್ ಮ್ಯಾನೇಜರ್ ವರದ ರಾವ್, ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರಿಗೆ ತುರ್ತು ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಂಡು ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಅನುಮಾಡಿಕೊಡುವಂತೆ ನಿರ್ದೇಶನ ನೀಡಿದರು.
ಸಾಣೂರು ಯುವಕ ಮಂಡಲದ ಮೈದಾನದ ತಡೆಗೋಡೆಯನ್ನು ಕೆಡವಿ ಹಾಕಲಾಗಿದ್ದು, ಇದೀಗ ಪಕ್ಕದಲ್ಲಿ 70 ಮೀ. ಉದ್ದಕ್ಕೆ ತಡೆಗೋಡೆ ನಿರ್ಮಾಣವಾಗಿದ್ದರೂ ಸುಮಾರು 40 ಮೀ. ಉದ್ದಕ್ಕೆ ತಡೆಗೋಡೆಯನ್ನು ನಿರ್ಮಾಣ ಮಾಡದೆ, ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯನ್ನು ತಂದೊಡುತ್ತಿದೆ ಎಂದು ಸಾಣೂರು ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷ ಪ್ರಸಾದ್ ಪೂಜಾರಿ ಹಾಗೂ ಜಗದೀಶ್ ಶೆಟ್ಟಿಗಾರ್ ಸಚಿವರ ಬಳಿ ಕೂಡಲೇ ತಡೆಗೋಡೆ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸುವಂತೆ ಒತ್ತಾಯಿಸಿದರು. ಈ ಬಗ್ಗೆ ಎರಡು ವಾರಗಳ ಹಿಂದೆ ಸಾಣೂರು ಯುವಕ ಮಂಡಲದ ಸದಸ್ಯರು, ಗ್ರಾಮ ಪಂಚಾಯತ್ ಆಡಳಿತ, ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹಾಗೂ ಸ್ಥಳೀಯ ನಿವಾಸಿಗಳು ರಸ್ತೆಗಳಿದು ತಡೆಗೋಡೆ ನಿರ್ಮಾಣ ಕಾರ್ಯವನ್ನು 40 ಮೀ. ವಿಸ್ತರಿಸುವಂತೆ ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿದ್ದರು.

ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಕಳೆದ ಎರಡು ವರ್ಷಗಳಿಂದ ಹಲವಾರು ಬಾರಿ ಸ್ಥಳ ಪರಿಶೀಲನೆ ನಡೆದು ಶಾಸಕರ, ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನ ಸಭೆ ನಡೆದರೂ ತೀರಾ ಅಗತ್ಯವಾದ 1. 6 ಕಿಲೋಮೀಟರ್ ಸರ್ವಿಸ್ ರಸ್ತೆಗೆ ಇನ್ನೂ ಪ್ರಸ್ತಾವನೆ ಸಲ್ಲಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ 12 ಅಡ್ಡರಸ್ತೆಗಳಲ್ಲಿ ಜಲ್ಲಿಕಲ್ಲು ಹಾಗೂ ಮರಳು ಹರಡಿದ್ದು, ವಾಹನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಆತಂಕದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಮುಖ್ಯ ರಸ್ತೆಗೆ ಡಾಮರೀಕರಣ ನಡೆಯುತ್ತಿದ್ದರೂ, ಅಡ್ಡರಸ್ತೆಗೆ ಕನಿಷ್ಠ 50 ಮೀ. ಡಾಮರೀಕರಣ ಮಾಡದಿರುವ ಹಾಗೂ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಕಡೆ ಹಳೆ ಬಸ್ಸು ನಿಲ್ದಾಣಗಳನ್ನು ಕೆಡವಿ, ರಸ್ತೆ ವಿಸ್ತರಣಾ ಕಾರ್ಯ ನಡೆಸಿದ್ದರೂ ಈವರೆಗೆ ಕನಿಷ್ಠ ತಾತ್ಕಾಲಿಕ ಬಸ್ಸು ತಂಗುದಾಣವನ್ನು ಕೂಡ ನಿರ್ಮಿಸದೆ ಹೊಸ ಬಸ್ಸು ತಂಗುದಾಣಗಳಿಗೆ ಜಾಗವನ್ನು ನಿಗದಿಪಡಿಸದೆ ತೀರಾ ನಿರ್ಲಕ್ಷ ತೋರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರೊಂದಿಗೆ ಅರಣ್ಯ ಇಲಾಖೆಯ ಅನುಮತಿ ಸಿಗದೆ ಸಾಣೂರಿನ ಗಡಿ ಪ್ರದೇಶ ಚಿಲಿಂಬಿ ಗುಡ್ಡ ಪರಿಸರದ ಸುಮಾರು ಒಂದುವರೆ ಕಿಲೋ ಮೀಟರ್ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭವಾಗದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ಗಮನ ಸೆಳೆದರು.
ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ ಜೈನ್ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಸಾಣೂರಿಗೆ ತೀರ ಅಗತ್ಯದ ರಸ್ತೆ ನಿರ್ಮಾಣ ಕಾಮಗಾರಿಗೆ ಸಚಿವರಿಗೆ ಮನವಿ ನೀಡಿದರು.

ಸಾಣೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸುಚೇತ ಕಾಮತ್, ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಲೀನಾ, ಕಾಲೇಜು ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಶೋಕ ಶೆಟ್ಟಿ ಮತ್ತು ಮಾಧವ ಭಂಡಾರ್ಕರ್ ಅವರು ವಿದ್ಯಾಸಂಸ್ಥೆಗೆ ದಿನನಿತ್ಯ 500ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸಂಚರಿಸುವ ರಸ್ತೆಗೆ ಡಾಮರೀಕರಣ ಮಾಡದೆ, ಎತ್ತರದಲ್ಲಿರುವ ತಡೆಗೋಡೆ ಮೇಲೆ ಸುರಕ್ಷಿತ ಗ್ರಿಲ್‌ಗಳನ್ನು ಅಳವಡಿಸದಿರುವ ಬಗ್ಗೆ ಸಂಸದರ ಗಮನ ಸೆಳೆದರು.
ಮುರತ್ತಂಗಡಿಯ ಸ್ಥಳೀಯ ನಿವಾಸಿ ಗಣೇಶ್, ಗುಡ್ಡ ಕಡಿತದ ಪರಿಣಾಮವಾಗಿ ಎತ್ತರದಲ್ಲಿರುವ ತಮ್ಮ ವಾಸದ ಮನೆ ಅಪಾಯಕಾರಿ ಸ್ಥಿತಿಯಲ್ಲಿರುವ ಬಗ್ಗೆ ಸಂಸದರ ಗಮನ ಸೆಳೆದಾಗ ತಕ್ಷಣವೇ ಅವರು ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರಿಗೆ ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿದರು.
ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಸಂಸದರು ಈ ಬಗ್ಗೆ ಹೆದ್ದಾರಿ ಇಲಾಖಾಧಿಕಾರಿಗಳು ಮತ್ತು ಗುತ್ತಿಗೆದಾರರ ಜೊತೆಗೆ ಸಮಾಲೋಚನೆ ನಡೆಸಿ ಅಗತ್ಯ ಪ್ರಸ್ತಾವನೆಗಳನ್ನು ಸಂಸದರ ಕಚೇರಿಗೆ ಕೂಡಲೇ ಕಳುಹಿಸಿಕೊಡುವಂತೆ ನಿರ್ದೇಶಿಸಿದರು.
ಎರಡು ತಿಂಗಳ ಒಳಗೆ ಕಾರ್ಯ ಪ್ರಗತಿಯಲ್ಲಿರುವ ಡಾಮರೀಕರಣ ಕೆಲಸ ಕಾರ್ಯಗಳನ್ನು ಸಂಪೂರ್ಣಗೊಳಿಸಿ ಅಡ್ಡರಸ್ತೆಗಳಿಗೆ ಡಾಮರೀಕರಣ, ಹೊಸ ಬಸ್ಸು ತಂಗುದಾಣಗಳ ನಿರ್ಮಾಣ, ತಡೆಗೋಡೆ ವಿಸ್ತರಣೆ ಬೀದಿ ದೀಪ ವ್ಯವಸ್ಥೆಯನ್ನು ಸಂಪೂರ್ಣಗೊಳಿಸುವಂತೆ ಹಾಗೂ ಅರಣ್ಯ ಇಲಾಖೆಯಿಂದ ಎದುರಾಗುತ್ತಿರುವ ತೊಡಕುಗಳ ಬಗ್ಗೆ ತುರ್ತು ಗಮನಹರಿಸಿ, ಸಮಸ್ಯೆಯನ್ನು ಬಗೆಹರಿಸುವುದಾಗಿ ಜನತೆಗೆ ಭರವಸೆ ನೀಡಿದರು.
ಈ ಸಂದರ್ಭ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಯಶೋಧ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸದಾಶಿವ ಮೂಲ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಕರುಣಾಕರ ಕೋಟ್ಯಾನ್, ವಸಂತ, ಸರಸ್ವತಿ, ಸತೀಶ್, ಪ್ರಕಾಶ್ ರಾವ್, ಸುಮತಿ, ಮಾಜಿ ಜಿ. ಪಂ. ಸದಸ್ಯ ಉದಯ ಕೋಟ್ಯಾನ್, ಮಾಜಿ ತಾ.ಪಂ. ಸದಸ್ಯ ಪ್ರವೀಣ್ ಕೋಟ್ಯಾನ್, ಪ್ರಮುಖರಾದ ದೇವಾನಂದ ಶೆಟ್ಟಿ, ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.































