ಚಳಿಗಾಲದ ಆರಂಭದಲ್ಲಿ ಕಾಡುವ ಸಮಸ್ಯೆಗಳು

ಋತು ಮುಗಿದು ಮುಂದಿನ ಋತುವಿಗೆ ಕಾಲಿಡುವಾಗ ವಾತಾವರಣದಲ್ಲಿ ದಿನದಲ್ಲಿ ಅನೇಕ ಬದಲಾವಣೆ ಆಗುತ್ತಿರುತ್ತದೆ. ಹಗಲಲ್ಲಿ ಬಿಸಿಲು ರಾತ್ರಿ ಚಳಿ ಜಾಸ್ತಿಯಾಗುತ್ತದೆ. ಈ ವಾತಾವರಣದ ಬಿಸಿಲು ಚಳಿಯ ಕಣ್ಣ ಮುಚ್ಚಾಲೆ ಆಟ ನಮ್ಮ ದೇಹವು ಹೊಂದಿಕೊಳ್ಳಲು ಕಷ್ಟ ಪಡುತ್ತದೆ. ಈ ಸಮಯವನ್ನು ಋತು ಸಂಧಿ ಎಂದು ಆಯುರ್ವೇದದಲ್ಲಿ ಉಲ್ಲೇಖವಿದೆ. ಹಿಂದಿನ ಹಾಗೂ ಮುಂದಿನ ಋತುವಿನ ಮಧ್ಯದ 15 ದಿನಗಳ ಕಾಲ ಅತಿ ಸೂಕ್ಷ್ಮ ಕಾಲಾವೆನ್ನಬಹುದು. ಆರೋಗ್ಯ ಹದಗೆಡುತ್ತದೆ. ರೋಗ ನಿರೋಧಕ ಶಕ್ತಿ ಕುಂದುತ್ತದೆ. ಅತ್ಯಂತ ಜಾಗರೂಕವಾಗಿ ಇರಬೇಕಾದ ಕಾಲವಿದು. ಈ ಕಾಲದಲ್ಲಿ ಏನು ಮಾಡಬೇಕು ಎಂದು ತಿಳಿದುಕೊಳ್ಳೋಣ.

ಆಯುರ್ವೇದದಲ್ಲಿ ಪ್ರತಿ ಋತುವಿನಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳಿವೆ. ಇದನ್ನು ಋತುಚರ್ಯ ಎನ್ನುವರು. ನಾವು ಹಿಂದಿನ ಋತುವಿನ ನಿಯಮಗಳನ್ನು ಕ್ರಮೇಣ ಬಿಟ್ಟು ಮುಂದಿನ ಋತುವಿನ ನಿಯಮಗಳನ್ನು ಕ್ರಮೇಣ ಪಾಲಿಸಲು ಆರಂಭಿಸಬೇಕು. ಒಂದು ವರ್ಷದಲ್ಲಿ ಆರು ಋತುಗಳು ಆದ್ದರಿಂದ ಆರು ಋತು ಸಂಧಿಗಳು ಇರುತ್ತದೆ. ಈಗ ನಾವು ಶರದ್ ಹಾಗೂ ಹೇಮಂತ್ ಋತು ಸಂಧಿಯ ಕಾಲದಲ್ಲಿ ಇದ್ದೇವೆ. ಈ ಕಾಲದಲ್ಲಿ ಕಾಡುವ ಸಮಸ್ಯೆ ಹಾಗೂ ಪರಿಹಾರವನ್ನು ತಿಳಿದುಕೊಳ್ಳೋಣ.

ಈ ಸಮಯದಲ್ಲಿ ಮೊದಲಿಗೆ ಕಾಡುವ ಸಮಸ್ಯೆ ಶೀತ, ಜ್ವರ ಹಾಗೂ ಕೆಮ್ಮು. ಇದನ್ನು ತಡೆಯಲು ದಿನಾಲು ಬಿಸಿ ನೀರನ್ನು ಸೇವಿಸಿ. ಬಿಸಿಯಾದ ಆಹಾರ ಪಾನೀಯವನ್ನು ಸೇವಿಸಿ. ಬೆಳಿಗ್ಗೆ 6:30 ಗಂಟೆ ನಂತರ ಮನೆಯ ಹೊರಗೆ ಬನ್ನಿ. ಸೂರ್ಯನ ಕಿರಣಕ್ಕೆ ಮೈ ಕಾಯಿಸಿ, ಪ್ರಯಾಣ ಮಾಡುವಾಗ ಕಿವಿಯನ್ನು ಮುಚ್ಚಿಕೊಳ್ಳಿ. ಮನೆಯಲ್ಲಿ ಕೊತ್ತಂಬರಿ, ಜೀರಿಗೆ, ಕರಿಮೆಣಸು, ಶುಂಠಿ, ಅರಿಶಿನ, ತುಳಸಿ ಎಲೆ, ಬೆಲ್ಲ ಹಾಕಿ ಕಷಾಯ ಮಾಡಿ. ದಿನಕ್ಕೆ ಅರ್ಧ ಗ್ಲಾಸ್ ಸೇವಿಸಿ.

ಬಿಸಿ, ಶುಚಿ, ಪೌಷ್ಟಿಕ ಆಹಾರವನ್ನು ಸೇವಿಸಿರಿ. ಹಸಿರು ತರಕಾರಿ ಸೂಪ್, ಅಡುಗೆಯಲ್ಲಿ ಮಸಾಲೆ ಪದಾರ್ಥಗಳನ್ನು ಬಳಸಿ. ತೆಂಗಿನೆಣ್ಣೆ ಅಥವಾ ತುಪ್ಪದ ಒಗ್ಗರಣೆ ಹಾಕಿ. ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಒಂದು ಚಮಚ ಶುದ್ಧ ತುಪ್ಪವನ್ನು ಬೆರೆಸಿ ಕುಡಿಯಿರಿ. ಈ ಕಾಲದಲ್ಲಿ ವಾತ ಹಾಗೂ ಪಿತ್ತದೋಷವು ಉಲ್ಬಣಗೊಳ್ಳುವುದರಿಂದ ಇದು ಒಳ್ಳೆಯದು. ಈ ಋತುವಿನಲ್ಲಿ ಬೆಳೆಯುವ ತರಕಾರಿ ಹಣ್ಣುಗಳನ್ನು ಸೇವಿಸಿ.

ಚರ್ಮ ಸುಕ್ಕುಗಟ್ಟುವುದು ಇನೊಂದು ಸಮಸ್ಯೆ. ದಿನನಿತ್ಯ ಎಳ್ಳೆಣ್ಣೆಯಿಂದ ಮಸಾಜ್ ಮಾಡಿ ಸ್ನಾನ ಮಾಡಿ. ಇದರಿಂದ ಕೀಲು ನೋವು ಕೂಡ ಕಡಿಮೆಯಾಗುವುದು. ಕಡ್ಲೆ ಹಿಟ್ಟು, ಹೆಸರುಬೇಳೆ ಹಿಟ್ಟು ಬೆರೆಸಿ ಸೋಪಿನ ಬದಲು ಬಳಸಿ. ಬಾತ್ ಪೌಡರ್ ಅನ್ನು ಮನೆಯಲ್ಲಿ ತಯಾರಿಸಬಹುದು. ಕಿತ್ತಳೆ ಸಿಪ್ಪೆಯನ್ನು ಮೂರು ನಾಲ್ಕು ದಿವಸ ಒಣಗಿಸಿ ಪುಡಿಮಾಡಿ ಇದಕ್ಕೆ ಅರಿಶಿನ, ಕಡಲೆಹಿಟ್ಟು, ಹಸಿ ಹಾಲು ಹಾಕಿ ಬೆರೆಸಿ ಸೋಪ್ ಬದಲು ಬಳಸಿ. ಹೆಸರುಕಾಳು ಪೌಡರ್, ಚಂದನ ಪೌಡರ್, ಒಣಗಿದ ಗುಲಾಬಿ ದಳ ಪೌಡರ್, ಕಹಿಬೇವಿನ ಪೌಡರ್ ಬೆರೆಸಿ ಹಾಲು ಅಥವಾ ರೋಜ್ ವಾಟರ್ ಹಾಕಿ ಬಳಸಿ.

ಈ ಸಮಯದಲ್ಲಿ ಕೂದಲಿನ ಸಮಸ್ಯೆ ಕೂಡ ಜಾಸ್ತಿ. ಡ್ಯಾಂಡ್ರಫ್, ಕೂದಲು ಉದುರುವುದು ಸಮಸ್ಯೆ ಜಾಸ್ತಿಯಾಗುತ್ತದೆ. ಆದ್ದರಿಂದ ಶಾಂಪೂವಿನ ಬದಲು ಹೇರ್ ಪ್ಯಾಕ್ ಅನ್ನು ಬಳಸಿ. ಶಿಕಕಾಯ ಪೌಡರ್, ರೀಟಾ ಪೌಡರ್, ದಾಸವಾಳ ಹೂವಿನ ಪೌಡರ್, ಆಮ್ಲ ಪೌಡರ್, ಕರಿಬೇವಿನ ಪೌಡರ್, ಕಹಿಬೇವಿನ ಪೌಡರ್ ಇದನ್ನೆಲ್ಲಾ ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿ ತಲೆಗೆ ಹಚ್ಚಿ ಒಂದು ಗಂಟೆ ಇಡಿರಿ. ನಂತರ ಕೂದಲನ್ನು ತೊಳೆಯಿರಿ ಶಾಂಪೂವಿನ ಅಗತ್ಯವಿರುವುದಿಲ್ಲ. ಇದರಿಂದ ಕೂದಲಿನ ಎಲ್ಲಾ ಸಮಸ್ಯೆಗಳು ಮಾಯ. ರೋಗ ಬರೆದಂತೆ ನಮ್ಮ ಪ್ರಯತ್ನ ನಾವು ಮಾಡೋಣ.







error: Content is protected !!
Scroll to Top