ಶ್ರೀ ಭುವನೇಂದ್ರ ಕಾಲೇಜಿನಲ್ಲಿ 65ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ

ಕಾರ್ಕಳ : ತಂದೆ ತಾಯಿಯ ಋಣಭಾರ ಮತ್ತು ಗುರು ಹಿರಿಯರ ಸಹಕಾರ ಎಲ್ಲಕ್ಕಿಂತ ಮಹತ್ವವಾದುದು. ಎಷ್ಟೇ ಸವಾಲುಗಳು ಎದುರಾದರೂ ಹಿಂಜರಿದು ಬದುಕಿಗೆ ವಿಮುಖರಾಗಬಾರದು. ಕಷ್ಟ ಮುಗಿದ ಬಳಿಕ ಸುಖ ಬಂದೇ ಬರುತ್ತದೆ ಎನ್ನುವ ಆತ್ಮವಿಶ್ವಾಸ ಸದಾ ನಮ್ಮ ಜೊತೆಗೆ ಇರಬೇಕು ಎಂದು ಭವಾನಿ ಟ್ರಸ್ಟ್ ಮುಂಬೈ ಇದರ ಸ್ಥಾಪಕಾಧ್ಯಕ್ಷ ಬಂಟ್ವಾಳ ಕುಸುಮೋದರ ಡಿ. ಶೆಟ್ಟಿ ಹೇಳಿದರು.
ಅವರು ನ. 30ರಂದು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ 65ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.

ಆಕ್ಸಿಸ್ ಬ್ಯಾಂಕಿನ ಹಿರಿಯ ಉಪಾಧ್ಯಕ್ಷ, ಕಾಲೇಜಿನ ಪೂರ್ವ ವಿದ್ಯಾರ್ಥಿ ಸಿಎ ಪರಮೇಶ್ ರಾಜಶೇಖರ್ ಮಾತನಾಡಿ, ನಾವು ಜನರ ಜೊತೆ ಸದಾ ಬೆರೆಯುತ್ತಿರಬೇಕು. ನಾವು ಅಂದುಕೊಂಡ ಹಾಗೆ ಯಾವುದೂ ಆಗುವುದಿಲ್ಲ ಅನ್ನುವ ಋಣಾತ್ಮಕ ಚಿಂತನೆ ವಿದ್ಯಾರ್ಥಿಗಳಲ್ಲಿ ಯಾವತ್ತೂ ಬರಬಾರದು. ನಾನು ಈ ಕಾಲೇಜಿನ ವಿದ್ಯಾರ್ಥಿಯಾಗಿ ನನಗೆ ಇಲ್ಲಿ ಕಲಿತದ್ದಕ್ಕೆ ಬಹಳ ಹೆಮ್ಮೆಯಿದೆ. ಈ ವಿಶ್ವಾಸದ ಜೊತೆಗೆ ನೀವೂ ಹೆಜ್ಜೆ ಹಾಕಬೇಕು ಎಂದರು.

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ರಮೇಶ್ ಎಸ್‌.ಸಿ. ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳ ಮನೋಧರ್ಮ ಬದಲಾಗಿದೆ. ಕೃತಕ ಬುದ್ಧಿಮತ್ತೆಯ ಪರಿಣಾಮ ವಿದ್ಯಾರ್ಥಿಗಳು ತುಂಬ ಆತಂಕವನ್ನು ಎದುರಿಸಬಹುದಾದರೂ ದೃಢತೆಯಿಂದ ಬರುವ ಸವಾಲನ್ನು ಎದುರಿಸಬೇಕು. ರ‍್ಯಾಂಕ್ ಪಡೆದುಕೊಳ್ಳುವ ಹಂತಕ್ಕೆ ಎಲ್ಲರೂ ತಲುಪಬೇಕಾದ ಸಿದ್ಧತೆಯನ್ನು ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿಎ ಶಿವಾನಂದ ಪೈ ಮಾತನಾಡಿ, ಕುಸುಮೋದರ ಶೆಟ್ಟಿಯವರ ಬದುಕು ಮತ್ತು ಹೆತ್ತವರ ಬಗೆಗಿನ ಅವರ ಕಾಳಜಿ ನಮ್ಮ ವಿದ್ಯಾರ್ಥಿಗಳಿಗೆ ಸದಾ ಆದರ್ಶವಾಗಬೇಕು. ಅವರು ಬದುಕಿನ ಕಷ್ಟಗಳಿಗೆ ಬೆನ್ನು ಹಾಕದೆ ಶೃದ್ಧೆಯಿಂದ ಕಷ್ಟಗಳನ್ನು ಎದುರಿಸಿದ ರೀತಿ ಅನುಕರಣೀಯ. ದೊಡ್ಡಸ್ಥಿಕೆಯನ್ನು ತೋರಿಸದ ವ್ಯಕ್ತಿತ್ವವೊಂದು ನಮ್ಮ ವಿದ್ಯಾರ್ಥಿ ವೇದಿಕೆಯಲ್ಲಿ ವಿರಾಜಮಾನವಾಗಿರುವುದು ನಮ್ಮ ಕಾಲೇಜಿ ಹೆಮ್ಮೆಯ ಸಂಗತಿಯಾಗಿದೆ ಎನ್ನುತ್ತಾ ಎಲ್ಲರೂ ನೆನಪಿಸಿಕೊಳ್ಳುವ ಶ್ಲಾಘಿಸುವ ಬದುಕೊಂದನ್ನು ಅವರು ದಕ್ಕಿಸಿಕೊಂಡಿರುವುದು ಅವರ ಬದುಕಿನ ಸಾರ್ಥಕತೆಯಾಗಿದೆ ಎಂದರು.

ಸನ್ಮಾನ
ಕಳೆದ ಸಾಲಿನಲ್ಲಿ ರ‍್ಯಾಂಕ್ ಪಡೆದ ತೃಪ್ತಿ ನಾಯಕ್, ದೀಪ್ತಿ ವೇಲಂಕರ್, ಜೋಯ್ಲಿನ್ ಡಿಸೋಜಾ ಹಾಗೂ ಆಂಟೋನಿ ಜಿ ಲೋಬೋ, ಸ್ವರ್ಣ ಪದಕ ವಿಜೇತರಾದ ಪಿ. ಎಸ್. ಅನಿಶಾ ಇವರನ್ನು ಸನ್ಮಾನಿಸಲಾಯಿತು. ಕ್ರೀಡಾ ವಿಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಾಧನೆಗೈದ ದೀಕ್ಷಾ, ನಿರೀಕ್ಷಾ ಯೋಗಾಸನದಲ್ಲಿ ಸಾಧನೆಗೈದ ಅನನ್ಯ ಅಲ್ಲದೆ ಯಕ್ಷಗಾನದಲ್ಲಿ ಪಾತ್ರ ವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ಇದೇ ವೇದಿಕೆಯಲ್ಲಿ ವಿತರಿಸಲಾಯಿತು. ಮುಖ್ಯ ಅತಿಥಿಗಳಾದ ಕುಸುಮೋದರ ಡಿ ಶೆಟ್ಟಿ ಹಾಗೂ ಸಿಎ ಪರಮೇಶ್ ರಾಜಶೇಖರ್ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ದತ್ತಾತ್ರೇಯ ಮಾರ್ಪಳ್ಳಿ, ಸಹಕ್ಷೇಮಪಾಲನಾಧಿಕಾರಿ ಪ್ರೊ ನಂದಕಿಶೋರ್ ಕೆ. ಹಾಗೂ ಪದವಿ ಪೂರ್ವ ಮತ್ತು ಪದವಿ ತರಗತಿಗಳ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್ ಸ್ವಾಗತಿಸಿ, ವಿದ್ಯಾರ್ಥಿಗಳಾದ ವಿಯೋಲಾ ರೊಸಾರಿಯೋ ಹಾಗೂ ಜೇಸನ್ ಕಾರ್ಯಕ್ರಮ ನಿರೂಪಿಸಿದರು. ಆರನ್ ಮಿರಾಂದ ವಂದಿಸಿದರು.





























































































error: Content is protected !!
Scroll to Top