ಪೇಶಾವರ : ಪಾಕಿಸ್ತಾನದಲ್ಲಿ ನಡೆದ ಪ್ರತ್ಯೇಕ ಭಯೋತ್ಪಾದನಾ ದಾಳಿಯಲ್ಲಿ 19 ಯೋಧರು ಮೃತಪಟ್ಟಿದ್ದು ಹಲವು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಜಂಟಿ ಚೆಕ್ ಪೋಸ್ಟ್‌ಗೆ ಆತ್ಮಹತ್ಯಾ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆದಿದ್ದು ಪರಿಣಾಮ 12 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಸೇನೆ, ನಂತರ ನಡೆದ ಎನ್‌ಕೌಂಟರ್‌ನಲ್ಲಿ ಆರು ಉಗ್ರರು ಹತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ಬನ್ನು ಜಿಲ್ಲೆಯ ಮಲಿಖೇಲ್ ಪ್ರದೇಶದ ಜಂಟಿ ಚೆಕ್ ಪೋಸ್ಟ್ ಮೇಲೆ ಉಗ್ರರು ದಾಳಿ ನಡೆಸಲು ಯತ್ನಿಸಿದರು. ಆದರೆ ಭದ್ರತಾ ಪಡೆಗಳು ಪೋಸ್ಟ್ ಪ್ರವೇಶಿಸುವ ಅವರ ಪ್ರಯತ್ನವನ್ನು ಪರಿಣಾಮಕಾರಿಯಾಗಿ ವಿಫಲಗೊಳಿಸಿದವು ಎಂದು ಸೇನೆಯ ಮಾಧ್ಯಮ ವಿಭಾಗ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ (ISPR) ತಿಳಿಸಿದೆ.








