ಕಾರ್ಕಳ: ಡ್ರಗ್ಸ್‌ ಮಾಫಿಯಾ ಮಟ್ಟ ಹಾಕಲು ಅಭಿನವ ಭಾರತ ಮನವಿ

ಕಾರ್ಕಳ: ಕಾರ್ಕಳದ ಶಾಲಾ ಕಾಲೇಜುಗಳಲ್ಲಿ ಮತ್ತು ತಾಲೂಕಿನಾದ್ಯಂತ ವ್ಯಾಪಿಸಿರುವ ಗಾಂಜಾ, ಡ್ರಗ್ಸ್ ಮಾಫಿಯಾದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕಾರ್ಕಳ ಪೊಲೀಸ್ ಅಧೀಕ್ಷಕರಿಗೆ ಅಭಿನವ ಭಾರತ ಕಾರ್ಕಳ ಮನವಿ ಮಾಡಿದೆ.
ಡ್ರಗ್ಸ್ ಮಾಫಿಯಾ ಸುಶಿಕ್ಷಿತ ಸಭ್ಯ ತಾಲೂಕು ಕಾರ್ಕಳದಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚಿ ದೇಶದ ಭವಿಷ್ಯದ ಸಶಕ್ತ ಪ್ರಜೆಗಳನ್ನು ನಿರ್ವೀಯರನ್ನಾಗಿಸಿ, ಅವರನ್ನು ದೇಶದ್ರೋಹಿ ಕೃತ್ಯಗಳಿಗೆ ಬಳಸಿಕೊಳ್ಳುವಂತಹ ಮಟ್ಟಕ್ಕೆ ಬೆಳೆದಿರುವುದು ಬಹಳ ಆತಂಕಕ್ಕೆ ಕಾರಣವಾಗಿದೆ.
ಅಮಾಯಕ ಯುವತಿಯರಿಗೆ ಗಾಂಜಾ ಇನ್ನಿತರ ಮಾದಕ ವಸ್ತುಗಳನ್ನು ಮೋಸದಿಂದ ಅಥವಾ ಬಲವಂತದಿಂದ ತಿನ್ನಿಸಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ, ಅಶ್ಲೀಲ ಚಿತ್ರಗಳನ್ನು ತೆಗೆದು ನಿರಂತರ ದೈಹಿಕ ಶೋಷಣೆ ಮಾಡುತ್ತಿರುವ ಹಲವಾರು ಘಟನೆಗಳು ನಡೆಯುತ್ತಿದ್ದು, ಮರ್ಯಾದೆಗೆ ಅಂಜಿ ಇಂತಹ ಅನೇಕ ಘಟನೆಗಳು ಬೆಳಕಿಗೆ ಬರುತ್ತಿಲ್ಲ ಎಂದು ಅಭಿನವ ಭಾರತ ಮನವಿಯಲ್ಲಿ ತಿಳಿಸಿದೆ.
ದೇಶದ ಸುದೃಢ ಆಸ್ತಿಯೆಂದರೆ ಈ ದೇಶದ ಯುವ ಜನತೆ. ದೇಶವನ್ನು ಅಸ್ಥಿರಗೊಳಿಸಲು ದೇಶ ವಿರೋಧಿಗಳು ಮಾಡುವ ಷಡ್ಯಂತ್ರದ ಮೊದಲ ಭಾಗ ಯುವ ಜನತೆಯ ದಾರಿ ತಪ್ಪಿಸಿ ಅವರನ್ನು ಮಾದಕ ವಸ್ತುಗಳ ದಾಸರನ್ನಾಗಿ ಮಾಡುವುದು. ದೇಶದ ಎಲ್ಲೆಡೆ ಇರುವ ಈ ಡ್ರಗ್ಸ್‌ ಮಾಫಿಯಾ ಕರ್ನಾಟಕದ ಕರಾವಳಿ ಭಾಗದಲ್ಲಿ ಬೇರೂರಿ ಹಲವು ದಶಕಗಳೇ ಕಳೆದರೂ ಸಂಬಂಧ ಪಟ್ಟ ಇಲಾಖೆಗಗಳು ಇಲ್ಲಿಯವರೆಗೆ ಯಾವುದೇ ರೀತಿಯ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಹೇಳಿದೆ.

ಬೇಡಿಕೆಗಳು

*ಮಾದಕ ದ್ರವ್ಯ ಮಾರಾಟ ಸಾಗಾಟ, ಸೇವನೆಯ ವಿರುದ್ಧ ತುರ್ತು ಕ್ರಮ ಕೈಗೊಳ್ಳಲು ಇರುವ ಪ್ರತ್ಯೇಕ ವಿಜಿಲೆನ್ಸ್ ಘಟಕವನ್ನು ಕೂಡಲೇ ಸಕ್ರಿಯಗೊಳಿಸಬೇಕು.

*ಮಾದಕ ದ್ರವ್ಯದ ಬಗ್ಗೆ ದೂರು ನೀಡಲು ಟೋಲ್ ಫ್ರೀ ನಂಬರ್ ನೀಡಬೇಕು.

*ಪ್ರತಿ ಶಾಲಾ ಕಾಲೇಜಿನಲ್ಲಿ ಡ್ರಗ್ಸ್ ವಿರುದ್ಧ ದೂರು, ಮಾಹಿತಿ ನೀಡಲು ದೂರು ಪೆಟ್ಟಿಗೆ ಸ್ಥಾಪಿಸಬೇಕು.

*ಹಳೆಯ ಡ್ರಗ್ಸ್ ಪೆಡ್ಲರ್‌ಗಳನ್ನು ಪ್ರತಿ ತಿಂಗಳು ಕರೆಯಿಸಿ ಪರೇಡ್ ನಡೆಸಬೇಕು.

*ಕಾರ್ಕಳ ಸೇರಿ ಉಡುಪಿ ಜಿಲ್ಲೆಯಾದ್ಯಂತ ಇರುವ ಡ್ರಗ್ಸ್ ಮಾಫಿಯಾದ ವಿರುದ್ಧ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜಿಲ್ಲೆಯ ಜನತೆ ನೆಮ್ಮದಿಯ ಜೀವನ ಸಾಗಿಸುವಂತೆ ಹಾಗೂ ದೇಶದ ಯುವ ಜನತೆ ಸುಶಿಕ್ಷಿತ ಸಭ್ಯ ನಾಗರಿಕರಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕು.



















































































error: Content is protected !!
Scroll to Top