ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ; ಹೆಜ್ಬುಲ್ಲ ಮಿಲಿಟರಿ ಕಮಾಂಡರ್‌ನ ಹತ್ಯೆ
ಜೆರಸಲೇಂ : ಇಸ್ರೇಲನ್ನು ಕೆಣಕಿದರೆ ಉಳಿಗಾಲವಿಲ್ಲ ಎನ್ನುವುದು ಜಾಗತಿಕವಾಗಿ ಇರುವ ನಂಬಿಕೆ. ತನ್ನ ಮೇಲೆರಗಿದವರನ್ನು ಮುಗಿಸದೆ ಇಸ್ರೇಲ್ ವಿರಮಿಸಿದ ನಿದರ್ಶನವೇ ಇಲ್ಲ. ಇದು ಇನ್ನೊಮ್ಮೆ ಸಾಬೀತಾಗಿದೆ. ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಭಯಾನಕವಾಗಿ ದಾಳಿ ನಡೆಸಿ ಸಾವಿರಾರು ನಾಗರಿಕರ ಸಾವಿಗೆ ಕಾರಣನಾಗಿದ್ದ ಹಮಾಸ್ ಸಂಘಟನೆಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಇರಾನ್‌ನಲ್ಲಿ ಹತ್ಯೆಯಾಗಿದ್ದಾನೆ.
ಕತಾರ್‌ನಿಂದ ಗೋಪ್ಯವಾಗಿ ಹಮಾಸ್ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದ ಹನಿಯೆ, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಟೆಹರಾನ್‌ಗೆ ಬಂದಿದ್ದ ವೇಳೆ ಹೊಂಚು ಹಾಕಿ ಇಸ್ರೇಲ್ ಅವನನ್ನು ಸಾಯಿಸಿದೆ.
ಇಷ್ಟು ಮಾತ್ರವಲ್ಲ ತನ್ನ ಮೇಲೆ ಆಗಾಗ ದಾಳಿ ಮಾಡುತ್ತಿರುವ ಹೆಜ್ಬುಲ್ಲ ಉಗ್ರ ಸಂಘಟನೆಯ ಮಿಲಿಟರಿ ಕಮಾಂಡರ್ ಫಾವುದ್ ಶುಕರ್ ಎಂಬಾತನನ್ನು ಬೇರೂತ್‌ನಲ್ಲಿ ಮಂಗಳವಾರ ಹತ್ಯೆಗೈದಿದೆ. ಹೀಗೆ ಬೆನ್ನುಬೆನ್ನಿಗೆ ಇಬ್ಬರು ಶತ್ರುಗಳನ್ನು ಸಾಯಿಸುವ ಮೂಲಕ ಇಸ್ರೇಲ್ ತನ್ನ ತಂಟೆಗೆ ಬಂದವರ ಗತಿ ಏನಾಗುತ್ತದೆ ಎಂದು ತೋರಿಸಿಕೊಟ್ಟಿದೆ.
ಇರಾನ್ ನಿರ್ಮಿತ ರಾಕೆಟ್ ಬಳಸಿ ಹೆಜ್ಬುಲ್ಲ ಉಗ್ರರು ಕೆಲದಿನಗಳ ಹಿಂದೆ ಇಸ್ರೇಲ್‌ನ 12 ಮಕ್ಕಳನ್ನು ಕೊಂದಿತ್ತು. ಇದಕ್ಕೆ ಪ್ರತೀಕಾರವಾಗಿ ಬೇರೂತ್ ಮೇಲೆ ಭಯಾನಕ ವಾಯುದಾಳಿ ನಡೆಸಿರುವ ಇಸ್ರೇಲ್ ಪ್ರಮುಖ ಮಿಲಿಟರ್ ಕಮಾಂಡರ್‌ನನನ್ನು ಹತ್ಯೆಗೈದಿದೆ.
ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಮತ್ತು ಆತನ ಒಬ್ಬ ಬಾಡಿಗಾರ್ಡ್‌ನನ್ನು ಇರಾನ್‌ನಲ್ಲಿ ಮಂಗಳವಾರ ಆತನಿದ್ದ ಮನೆಗೆ ದಾಳಿ ಮಾಡಿ ಹತ್ಯೆ ಮಾಡಲಾಗಿದೆ ಎಂದು ಪ್ಯಾಲೆಸ್ತೀನ್ ಸಂಘಟನೆ ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ. ಈ ಹತ್ಯೆಗೆ ಇಸ್ರೇಲ್ ಕಾರಣ ಎಂದು ಹಮಾಸ್ ಆರೋಪಿಸಿದೆ.
ಅಕ್ಟೋಬರ್ 7ರಂದು ಇಸ್ರೇಲ್ ಗಡಿ ಭಾಗದ ಒಳಗೆ ನುಗ್ಗಿ, ಭೀಕರ ದಾಳಿ ನಡೆಸುವ ಮೂಲಕ ಸುಮಾರು 1195 ಜನರ ಹತ್ಯೆಗೆ ಕಾರಣವಾಗಿದ್ದ ಹಮಾಸ್ ಗುಂಪನ್ನು ನಾಶಪಡಿಸುವುದಾಗಿ ಮತ್ತು ಅದರ ಮುಖ್ಯಸ್ಥ ಇಸ್ಮಾಯಿಲ್ ಹನಿಯೆನನ್ನು ಹತ್ಯೆ ಮಾಡುವುದಾಗಿ ಇಸ್ರೇಲ್ ಶಪಥ ಮಾಡಿತ್ತು. ಕತಾರ್‌ನಲ್ಲಿ ಅಡಗಿ, ಅಲ್ಲಿಂದ ಹಮಾಸ್‌ನ ರಾಜಕೀಯ ಕಾರ್ಯಾಚರಣೆ ನಡೆಸುತ್ತಿರುವ ಇಸ್ಮಾಯಿಲ್ ಹನಿಯೆ, ಇರಾನ್ ನೂತನ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಪದಗ್ರಹಣ ಸಮಾರಂಭದಲ್ಲಿ ಮಂಗಳವಾರ ಪಾಲ್ಗೊಂಡಿದ್ದ. ಆತನ ಇರಾನ್‌ನ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿಯನ್ನು ಕೂಡ ಭೇಟಿ ಮಾಡಿದ್ದ. ಇರಾನ್‌ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಇಸ್ಮಾಯಿಲ್ ಹನಿಯೆ ಹತ್ಯೆಯನ್ನು ಖಚಿತಪಡಿಸಿದೆ.
ಗಾಜಾ ನಗರ ಸಮೀಪದ ನಿರಾಶ್ರಿತರ ಶಿಬಿರದಲ್ಲಿ 1962ರಲ್ಲಿ ಜನಿಸಿದ್ದ ಇಸ್ಮಾಯಿಲ್ ಹನಿಯೆ, 1980ರ ದಶಕದಲ್ಲಿ ಹಮಾಸ್ ಸಂಘಟನೆಯನ್ನು ಸೇರಿಕೊಂಡಿದ್ದ. ಸಾಕಷ್ಟು ಚತುರನಾಗಿದ್ದ ಈತ, ಹಮಾಸ್ ಸಂಸ್ಥಾಪಕ ಹಾಗೂ ಆಧ್ಯಾತ್ಮಿಕ ನಾಯಕ ಶೇಖ್ ಅಹ್ಮದ್ ಯಾಸಿನ್‌ನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ. ಹೀಗಾಗಿ ಬಹಳ ಬೇಗನೆ ಅದರ ವಿವಿಧ ವಿಭಾಗಗಳ ನಾಯಕತ್ವ ಪಡೆದುಕೊಳ್ಳುವ ಮಟ್ಟಿಗೆ ಬೆಳೆದಿದ್ದ.







































