ಸಾಣೂರು ಇಂದಿರಾ ನಗರ ರಸ್ತೆಯ ಕೃತಕ ನೆರೆ ಸಮಸ್ಯೆಗೆ ಮುಕ್ತಿ

ಕಾರ್ಕಳ : ಸಾಣೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಇಂದಿರಾ ನಗರ ರಸ್ತೆಯು ತಗ್ಗು ಪ್ರದೇಶದಲ್ಲಿದ್ದು ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆ ಮೇಲೆಯೇ ಹರಿದು ಕೃತಕ ನೆರೆ ನಿರ್ಮಾಣಗೊಳ್ಳುತ್ತಿತ್ತು. ಇದೀಗ ಗ್ರಾಮಸ್ಥರ ನಿರಂತರ ಹೋರಾಟದ ಫಲವಾಗಿ ಈ ಸಮಸ್ಯೆಗೆ ಮುಕ್ತಿ ದೊರೆತಿದೆ.

ಸ್ಪಂದಿಸದ ಗುತ್ತಿಗೆದಾರ ಕಂಪೆನಿ
ಇಂದಿರಾನಗರ ಕಾಲೋನಿಯಲ್ಲಿ ನೂರಕ್ಕಿಂತಲೂ ಹೆಚ್ಚು ಮನೆಗಳಿದ್ದು, ಈ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ, ರಿಕ್ಷಾ ಸೇರಿದಂತೆ ಇನ್ನಿತರ ವಾಹನಗಳ ಚಾಲಕರು ಕೃತಕ ನೆರೆಯಿಂದಾಗಿ ಬಹಳ ಅಪಾಯಕಾರಿ ಸ್ಥಿತಿಯಲ್ಲಿ ವಾಹನಗಳನ್ನು ಚಲಾಯಿಸಬೇಕಾಗಿತ್ತು. ಇನ್ನು ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳು, ಸಾರ್ವಜನಿಕರು ಕೃತಕ ನೆರೆಯ ಸಂದರ್ಭ ತೊಂದರೆಗೊಳಗಾಗುತ್ತಿದ್ದರು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ನೀಡುತ್ತಿರಲಿಲ್ಲ. ಜೂ. 30ರಂದು ಶಾಸಕ ಸುನಿಲ್ ಕುಮಾರ್ ಅವರು ಈ ಪ್ರದೇಶಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರಿಗೆ ತಕ್ಷಣವೇ ಸೂಕ್ತ ಚರಂಡಿ ವ್ಯವಸ್ಥೆಯನ್ನು ಮಾಡುವಂತೆ ನಿರ್ದೇಶಿಸಿದ್ದರೂ, ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿರಲಿಲ್ಲ ಎಂದು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಮಾಧ್ಯಮಕ್ಕೆ ತಿಳಿಸಿರುತ್ತಾರೆ.

ವೀಡಿಯೋ ಚಿತ್ರೀಕರಣ
ಜು. 4 ರಂದು ಬೆಳಿಗ್ಗೆ 10:30 ಗಂಟೆಗೆ ಸುರಿದ ಭಾರಿ ಮಳೆಗೆ ಇಂದಿರಾನಗರ ಹೋಗುವ ಅಡ್ಡರಸ್ತೆಯ ಆರಂಭದ ಭಾಗದಲ್ಲಿ ಚರಂಡಿಯ ನೀರು ರಸ್ತೆಯ ಮೇಲೆ ಹರಿದು ಹೋಗಿ ಕೆರೆಯಂತಾಗಿ ರಸ್ತೆಯ ಮೇಲೆ ಚಲಿಸುವವರು ಕೃತಕ ನೆರೆಯಲ್ಲಿ ಅಪಾಯಕಾರಿಯಾಗಿ ನಡೆದಾಡಬೇಕಿತ್ತು. ಈ ಸಂದರ್ಭ ಪಂಚಾಯತ್ ಆಡಳಿತ ತಂಡ ಪುಲ್ಕೇರಿ ಬೈಪಾಸ್ ಸರ್ಕಲ್‌ನಿಂದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗಳ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿತ್ತು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಗುತ್ತಿಗೆದಾರ ಕಂಪೆನಿಯವರು ತಮ್ಮ ತಂಡದೊಂದಿಗೆ ಆಗಮಿಸಿ ಇಂದಿರಾನಗರ ಅಡ್ಡರಸ್ತೆಗೆ ಅಡ್ಡಲಾಗಿ ಕಾಂಕ್ರೀಟ್ ಮೋರಿಯನ್ನು ಹಾಕಿ ರಾಷ್ಟ್ರೀಯ ಹೆದ್ದಾರಿಯ ಮಟ್ಟಕ್ಕೆ ಕೆಳಮಟ್ಟದಲ್ಲಿದ್ದ ಇಂದಿರಾನಗರ ಅಡ್ಡರಸ್ತೆಯನ್ನು ಜಲ್ಲಿ ಸಿಮೆಂಟ್ ನಿಂದ ಏರಿಸಿ, ನೀರು ನಿಲ್ಲದಂತೆ ಸುವ್ಯವಸ್ಥಿತಗೊಳಿಸಿ, ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು ನರಸಿಂಹ ಕಾಮತ್‌ ಹೇಳಿದ್ದಾರೆ.































































error: Content is protected !!
Scroll to Top