ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳ ಸಭೆ

ಬೂತ್‌ ಮಟ್ಟದಲ್ಲಿ ಮಹಿಳೆಯರನ್ನು ಸಂಘಟಿತರನ್ನಾಗಿಸಿ – ವಿ. ಸುನಿಲ್‌ ಕುಮಾರ್

ಕಾರ್ಕಳ : ಸೌಹಾರ್ದಯುತ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಪ್ರತಿ ಬೂತ್‌ನಲ್ಲಿ ಮಹಿಳೆಯರನ್ನು ಸಂಘಟಿತರನ್ನಾಗಿಸುವ ಮೂಲಕ ಪಕ್ಷವನ್ನು ಸದೃಢಗೊಳಿಸಬೇಕೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಕಳದ ಶಾಸಕ ವಿ. ಸುನಿಲ್‌ ಕುಮಾರ್‌ ತಿಳಿಸಿದರು. ಅವರು ಜು. 5ರಂದು ವಿಕಾಸ ಕಚೇರಿಯಲ್ಲಿ ಜರುಗಿದ ಕಾರ್ಕಳ ತಾಲೂಕು ಬಿಜೆಪಿ ಮಹಿಳಾ ಮೋರ್ಚಾದ ನೂತನ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಹಿಳಾ ಮೋರ್ಚಾದ ಮಹಿಳೆಯರು ನಿಷ್ಠೆ ಪ್ರಾಮಾಣಿಕತೆಯೊಂದಿಗೆ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಈ ಬಾರಿಯು ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡು ಎಲ್ಲರಿಗೂ ಮಾದರಿಯಾಗಿ ಕಾರ್ಯನಿರ್ವಹಿಸಿ ಎಂದು ಕರೆ ನೀಡಿದರು.

ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾವು ಪಕ್ಷದ ಕಾರ್ಯಗಳೊಂದಿಗೆ ಹತ್ತಾರು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ. ಇದು ಮಾದರಿ ಕಾರ್ಯವೆಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲ ಕುಂದರ್‌ ಅಭಿಪ್ರಾಯಪಟ್ಟರು. ಪ್ರಸ್ತುತ ಕಾರ್ಕಳದಲ್ಲಿ ವಿನಯಾ ಬಂಗೇರ ಅವರ ಅಧ್ಯಕ್ಷೆಯಲ್ಲಿ ಮಹಿಳಾ ಮೋರ್ಚಾ ಅತ್ಯುತ್ತಮ ರೀತಿಯಲ್ಲಿ ಮುಂದುವರಿಯುತ್ತಿದೆ. ಪಕ್ಷವನ್ನು ಬಲಪಡಿಸುವಲ್ಲೂ ಮಹಿಳಾ ಮೋರ್ಚಾದ ಕಾರ್ಯ ಶ್ಲಾಘನೀಯವೆಂದು‍ ಶ್ಯಾಮಲ ಪ್ರಶಂಸಿಸಿದರು.

ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಂಧ್ಯಾ ರಮೇಶ್‌ ಮಾತನಾಡಿ ಮುಂದಿನ ಮೂರು ವರುಷದ ಅವಧಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗಬೇಕೆಂದು ತಿಳಿಸಿದರು. ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಕಾರ್ಕಳ ತಾಲೂಕು ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಸುಮಾ ರವಿಕಾಂತ್‌ ಅವರನ್ನು ಹಾಗೂ ಸುಚಿತ್ರಾ ಜಗದೀಶ್‌ ಶೆಟ್ಟಿ ಅವರನ್ನು ಕೋಶಾಧಿಕಾರಿಯನ್ನಾಗಿ ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

ಕೃಷಿ ಉತ್ತೇಜನ ಕಾರ್ಯಕ್ರಮ
ಜು. 13ರಂದು ಬೋಳ ಗ್ರಾಮದ ಪಾಲಿಂಗೇರಿ ಬಳಿ ಸತೀಶ್‌ ಪೂಜಾರಿಯವರ ಗದ್ದೆಯಲ್ಲಿ ಕೃಷಿ ಉತ್ತೇಜನ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಹಿರಿಯ ನಾಟಿ ಪರಿಣಿತರನ್ನು ಸನ್ಮಾನಿಸಲಾಗುವುದು ಎಂದು ಮಹಿಳಾ ಮೋರ್ಚಾ ಅಧ್ಯಕ್ಷೆ ವಿನಯಾ ಬಂಗೇರ ತಿಳಿಸಿದರು.


ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಮಹಿಳಾ ಮೋರ್ಚಾದ ಉಸ್ತುವಾರಿ ರವೀಂದ್ರ ಕುಮಾರ್, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಕಾರ್ಯದರ್ಶಿ ಕವಿತಾ ಹರೀಶ್, ಬಿಜೆಪಿ ಕಾರ್ಕಳ ಮಂಡಲದ ಪ್ರಧಾನ ಕಾರ್ಯದರ್ಶಿ ಬೋಳ ಸತೀಶ್ ಪೂಜಾರಿ, ಮಂಡಲ ಕಾರ್ಯಾಲಯ ಕಾರ್ಯದರ್ಶಿ ಜ್ಯೋತಿ ರಮೇಶ್, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನುತಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.







































































error: Content is protected !!
Scroll to Top