ಆತ್ಮಹತ್ಯೆ ಶಂಕೆ
ಅಯೋಧ್ಯೆ : ಅಯೋಧ್ಯೆಯ ರಾಮ ಮಂದಿರದಲ್ಲಿ ಇಂದು ನಸುಕಿನ ಹೊತ್ತು ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್‌ಎಸ್‌ಎಫ್ ಯೋಧ ಗುಂಡಿಗೆ ಬಲಿಯಾಗಿದ್ದಾರೆ. ಬೆಳಗ್ಗೆ 5.25ಕ್ಕೆ ಈ ಘಟನೆ ನಡೆದಿದೆ. ಸೈನಿಕನನ್ನು ಶತ್ರುಘ್ನ ವಿಶ್ವಕರ್ಮ(25) ಎಂದು ಗುರುತಿಸಲಾಗಿದೆ.
ಗುಂಡಿನ ಸದ್ದು ಕೇಳಿದ ಬಳಿಕ ಸಹ ಸಿಬ್ಬಂದಿ ಅಲ್ಲಿಗೆ ಓಡಿ ಬಂದಿದ್ದಾರೆ, ಅಷ್ಟರಲ್ಲಾಗಲೆ ಯೋದ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಬಹುತೇಕ ಇದು ಆತ್ಮಹತ್ಯೆ ಪ್ರಕರಣ ಎನ್ನಲಾಗಿದೆ.
ಯೋಧನ ಸಾವು ಅಯೋಧ್ಯೆ ದೇಗುಲ ಸಂಕೀರ್ಣದಲ್ಲಿ ಸಂಚಲನ ಮೂಡಿಸಿದೆ. ಘಟನಾ ಸ್ಥಳಕ್ಕೆ ಐಜಿ ಮತ್ತು ಎಸ್‌ಪಿ ಆಗಮಿಸಿದ್ದಾರೆ. ಫೋರೆನ್ಸಿಕ್ ತಂಡ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು. ಪ್ರಾಥಮಿಕ ತನಿಖೆಯಲ್ಲಿ ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ. ದೇವಸ್ಥಾನದ ಭದ್ರತೆಗಾಗಿ ಯೋಗಿ ಸರಕಾರ ನಾಲ್ಕು ವರ್ಷಗಳ ಹಿಂದೆ ಎಸ್‌ಎಸ್‌ಎಫ್ ಪಡೆಯನ್ನು ರಚಿಸಿತ್ತು.
ಘಟನೆಗೂ ಮುನ್ನ ಶತ್ರುಘ್ನ ಮೊಬೈಲ್ ನೋಡುತ್ತಿದ್ದ ಎಂದು ಮೃತ ಯೋಧನ ಸಹೋದ್ಯೋಗಿಗಳು ತಿಳಿಸಿದ್ದಾರೆ. ಅವರು ಕೆಲವು ದಿನಗಳಿಂದ ಯಾವುದೋ ಚಿಂತೆಯಲ್ಲಿದ್ದರು ಎಂಬುದಾಗಿ ತಿಳಿಸಿದ್ದಾರೆ, ಪೊಲೀಸರು ಅವರ ಮೊಬೈಲ್ ಅನ್ನು ಕೂಡ ವಿಚಾರಣೆಗೆ ಕಳುಹಿಸಿದ್ದಾರೆ. ಮೃತ ಯೋಧನ ಕುಟುಂಬಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರು ಸ್ಥಳಕ್ಕೆ ತಲುಪಿದ್ದಾರೆ.
























