ಅನುಚಿತ ಆಹಾರ ಹಾಗೂ ಜೀವನಶೈಲಿಯಿಂದ ಉಂಟಾಗುವುದು ಈ ಸಕ್ಕರೆ ಕಾಯಿಲೆ. ಔಷಧಕ್ಕಿಂತ ಆಹಾರ ಹಾಗೂ ಜೀವನ ಶೈಲಿಯ ಬದಲಾವಣೆಯಿಂದಲೇ ನಿಯಂತ್ರಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಔಷಧದಿಂದಲೇ ವಾಸಿಯಾಗಬೇಕೆಂದು ಜನಸಾಮಾನ್ಯರು ಬಯಸುತ್ತಾರೆ. ಆದರೆ ಬರಿ ಔಷದ ಸೇವನೆಯಿಂದ ಇದು ನಿಯಂತ್ರಣಕ್ಕೆ ಬರಲು ಕಷ್ಟ. ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುವ ಈ ಮಧುಮೇಹ ನಿಯಂತ್ರಣಕ್ಕೆ ಬಾರದಿದ್ದರೆ ಅಪಾಯವನ್ನು ಉಂಟುಮಾಡುತ್ತದೆ.
ಏನಿದು ಮಧುಮೇಹ?
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಆಗದಿದ್ದಾಗ ಸಂಭವಿಸುವುದು. ಇದರಲ್ಲಿ ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದಿಸಲು ಅಸಮರ್ಥವಾಗಿರುತ್ತದೆ.
ಆಯುರ್ವೇದದಲ್ಲಿ ಏನು ಹೇಳಿದೆ?
ಆಯುರ್ವೇದದಲ್ಲಿ ಪ್ರಮೇಹ ಎಂಬ ವಿವರಣೆ ನೀಡಲಾಗಿದೆ. ಪ್ರಮೇಹ ಅಂದರೆ ಅಧಿಕವಾಗಿ ಮೂತ್ರ ವಿಸರ್ಜನೆಯಾಗುವುದು. ಇದರಲ್ಲಿ 20 ಪ್ರಕಾರದ ಪ್ರಮೇಹಗಳ ವರ್ಣನೆ ಇದೆ. ಈ 20 ಪ್ರಕಾರಗಳಲ್ಲಿ ಕೊನೆಯ ಹಂತ ಮಧುಮೇಹ. ಅಂದರೆ ಉಳಿದ 19 ಪ್ರಕಾರದ ಪ್ರಮೇಹಗಳು ಮಧುಮೇಹದ ಪೂರ್ವ ಲಕ್ಷಣಗಳು ಎಂದು ಪರಿಗಣಿಸಬಹುದು. 10 ಕಫಜ ಪ್ರಮೇಹಗಳು, ಆರು ಪಿತ್ತಜ ಪ್ರಮೇಹ ಹಾಗೂ ನಾಲ್ಕು ವಾತಜ ಪ್ರಮೇಹ ಹೀಗೆ 20 ಪ್ರಕಾರಗಳು.
ಸಹಜವಾಗಿ ಅಥವಾ ವಂಶಿಕವಾಗಿ ಬರುವಂತದ್ದು ಸಹಜ ಪ್ರಮೇಹ ಎನ್ನುತ್ತಾರೆ. ದೋಷದ ದೃಷ್ಟಿಯಿಂದ ಬರುವಂತಹ ಪ್ರಮೇಹವನ್ನು ದೋಷದ ಪ್ರಮೇಹ ಎನ್ನಲಾಗಿದೆ. ಮೊದಲ 19 ಪ್ರಕಾರದ ಪ್ರಮೇಹವನ್ನು ಸಮಯದಲ್ಲಿ ಚಿಕಿತ್ಸೆ ಮಾಡದಿದ್ದಲ್ಲಿ ಮಧುಮೇಹದಲ್ಲಿ ಪರಿಣಮಿಸುತ್ತದೆ.

ಮಧುಮೇಹದ ಕಾರಣಗಳು
ಅಧಿಕ ಆಹಾರ ಸೇವನೆ,ಅಧಿಕ ನಿದ್ದೆ, ಅಧಿಕ ಮಾಂಸಹಾರ ಸೇವನೆ, ಹಾಲು ಉತ್ಪನ್ನಗಳ ಅಧಿಕ ಸೇವನೆ, ಮಧುರ, ಶೀತ, ಆಮ್ಲ, ಲವಣ, ಜಿಡ್ಡಿನ ಆಹಾರದ ಅಧಿಕ ಸೇವನೆ, ಕಫಜಾ ಆಹಾರ ಸೇವನೆ, ಸಕ್ಕರೆ, ಬೆಲ್ಲದ ಸೇವನೆ. ದೈಹಿಕ ವ್ಯಾಯಾಮದ ಕೊರತೆ ದೀರ್ಘಕಾಲ ಕೂತಲ್ಲಿ ಕೆಲಸ ಮಾಡುವುದು, ಬೊಜ್ಜುತನ ಇದರ ಕಾರಣಗಳು.
ಮಧುಮೇಹವು ವಾತದಿಂದ ಆಗುವಂಥದ್ದು. ಇದು ನಿಯಂತ್ರಣ ಮಾಡದಿದ್ದಲ್ಲಿ ದೇಹದಲ್ಲಿ ದಾತು ಕ್ಷಯಕ್ಕೆ ಕಾರಣವಾಗುತ್ತದೆ.
ಮಧುಮೇಹ ನಿಯಂತ್ರಣ ಹೇಗೆ?
ಮೊದಲಿಗೆ ಕಾರಣಗಳನ್ನು ದೂರ ಮಾಡಿರಿ. ಆಹಾರದಲ್ಲಿ ಮಧುರ ಆಮ್ಲ ಲವಣ ರಸಯುಕ್ತ ಆಹಾರ ಸೇವನೆಯನ್ನು ತ್ಯಜಿಸಿರಿ. ಕಹಿ ಹಾಗೂ ಒಗರು ರಸದ ಆಹಾರ ಸೇವನೆ ಅಧಿಕ ಮಾಡಿರಿ. ದಿನಾಲು ಕನಿಷ್ಠ 45 ನಿಮಿಷಗಳ ನಡಿಗೆ ಅತ್ಯವಶ್ಯಕ. ಪ್ರಾಣಾಯಾಮದಲ್ಲಿ ಅನುಲೋಮ ವಿಲೋಮ, ಚಂದ್ರ ಭೇದನ, ಸೂರ್ಯಭೇದನ, ಕಪಾಲಭಾತಿ, ಅಗ್ನಿಸಾರ ಕ್ರಿಯೆ ಒಳ್ಳೆಯದು. ಆಸನಗಳಲ್ಲಿ ಸೂರ್ಯ ನಮಸ್ಕಾರ, ತ್ರಿಕೋಣಸನ, ತಾಡಾಸನ, ವೀರಾಸನ, ವಕ್ರಾಸನ, ಅರ್ಧ ಮತ್ಸೇಂದ್ರಿಯಾಸನ, ಉಷ್ಟ್ರಾಸನ, ಭುಜಂಗಾಸನ, ಧನುರಾಸನ, ಮಕರಾಸನ, ನೌಕಾಸನ, ಯೋಗ ಮುದ್ರಾ ಒಳ್ಳೆಯದು.
ಆಯುರ್ವೇದ ಔಷಧ ದ್ರವ್ಯಗಳು- ಹರಿತಕಿ, ಆಮಲಕಿ, ಜಂಬು, ಅಶ್ವತ, ಗೋಕ್ಷೂರ, ಖದಿರ ಮೊದಲಾದವುಗಳು.






