ಈ ವರ್ಷ ಹತ್ತು ಮಂದಿ ಅನುಮಾನಾಸ್ಪದ ರೀತಿಯಲ್ಲಿ ಸಾವು
ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಅನುಮಾನಾಸ್ಪದ ಸಾವಿನ ಸರಣಿ ಮುಂದುವರೆದಿದ್ದು, ಓಹಿಯೋದ ಕ್ಲೀವ್‍ಲ್ಯಾಂಡ್ ಎಂಬಲ್ಲಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಾಳೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ನ್ಯೂಯಾರ್ಕ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಮೃತ ವಿದ್ಯಾರ್ಥಿನಿಯನ್ನು ಉಮಾ ಸತ್ಯಸಾಯಿ ಗಡ್ಡೆ ಎಂದು ಗುರುತಿಸಲಾಗಿದೆ. ಆಕೆ ಓಹಿಯೋದ ಕ್ಲೀವ್‍ಲ್ಯಾಂಡ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ವಿದ್ಯಾರ್ಥಿನಿಯ ಸಾವಿನ ಬಗ್ಗೆ ಭಾರತೀಯ ದೂತವಾಸ ಕಚೇರಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಮೃತಳ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಘೋಷಿಸಿದೆ. ಮೃತದೇಹವನ್ನು ಭಾರತಕ್ಕೆ ಸಾಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯು ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಮೇಲಿನ ದಾಳಿಯ ಸರಣಿಯ ಮತ್ತೊಂದು ಪ್ರಕರಣವಾಗಿದೆ. ಮಾರ್ಚ್‍ನಲ್ಲಿ ಮೊಹಮ್ಮದ್ ಅಬ್ದುಲ್ ಅರಾಫತ್ ನಿಗೂಢವಾಗಿ ಕ್ಲೀವ್‍ಲ್ಯಾಂಡ್ ಪ್ರದೇಶದಿಂದ ನಾಪತ್ತೆಯಾಗಿದ್ದರು. ನಂತರ ಆತನ ಕುಟುಂಬಕ್ಕೆ ಆತನ ಬಿಡುಗಡೆಗೆ ಹಣ ನೀಡುವಂತೆ ಸುಲಿಗೆ ಕರೆ ಬಂದಿತ್ತು.
ಈ ವರ್ಷದ ಆರಂಭದಲ್ಲಿ, ಹೈದರಾಬಾದ್‍ನ ವಿದ್ಯಾರ್ಥಿ ಸೈಯದ್ ಮಜಾಹಿರ್ ಅಲಿ ಮೇಲೆ ಚಿಕಾಗೋದಲ್ಲಿ ಅಮಾನುಷವಾಗಿ ಹಲ್ಲೆ ನಡೆಸಲಾಗಿತ್ತು. ಬಳಿಕ ಚಿಕಾಗೋದಲ್ಲಿರುವ ಭಾರತೀಯ ದೂತಾವಾಸ ತಕ್ಷಣವೇ ಮಧ್ಯಪ್ರವೇಶಿಸಿ ಅಲಿ ಮತ್ತು ಅವರ ಕುಟುಂಬಕ್ಕೆ ನೆರವು ನೀಡಿತ್ತು. ಇಂಡಿಯಾನಾದ ಪಡ್ರ್ಯೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನೀಲ್ ಆಚಾರ್ಯ ಸಾವು ಮತ್ತು ಜಾರ್ಜಿಯಾದಲ್ಲಿ ವಿವೇಕ್ ಸೈನಿಯ ಕ್ರೂರ ಹತ್ಯೆ ನಡೆದಿತ್ತು. 2024ರ ಆರಂಭದಿಂದ ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ 10 ಸಾವು ಸಂಭವಿಸಿದೆ.





