ಎಳನೀರು, ತಂಪು ಪಾನೀಯಗಳಿಗೆ ಭಾರಿ ಬೇಡಿಕೆ
ಕಾರ್ಕಳ : ಕರಾವಳಿ ಸೇರಿದಂತೆ ಇಡೀ ರಾಜ್ಯದಲ್ಲಿ ಬಿಸಿಲು ಧಗಧಗಿಸುತ್ತಿದ್ದು, ಸೆಕೆಯಿಂದ ಜನ ಹೈರಾಣರಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಶುಕ್ರವಾರ ತಾಪಮಾನ 44.5 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಉಳಿದೆಡೆಯೂ ಸರಾಸರಿ 40 ಡಿಗ್ರಿ ಸೆಲ್ಶಿಯಸ್ ಸೆಕೆ ಇದ್ದು, ಈ ವರ್ಷ ಬರಗಾಲವೂ ಇರುವುದರಿಂದ ಜನರ ಸಮಸ್ಯೆಗಳು ಉಲ್ಬಣಿಸಿವೆ.
ಸೆಕೆಗೆ ಒಂದು ವಾರದಲ್ಲಿ ರಾಜ್ಯದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಬೆಂಗಳೂರು ಮತ್ತಿತರೆಡೆ ಕಾಲರಾ ರೋಗ ಕಾಣಿಸಿಕೊಂಡಿದೆ. ತಂಪುನಗರಿ ಎಂದೇ ಖ್ಯಾತವಾಗಿರುವ ಬೆಂಗಳೂರಿನಲ್ಲಿ ತಾಪಮಾನ 37 ಡಿಗ್ರಿ ಸೆಲ್ಶಿಯಸ್‌ಗೆ ತಲುಪಿದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಒಂದೆಡೆ ನೀರಿನ ಕೊರತೆ, ಇನ್ನೊಂದೆಡೆ ರಣಬಿಸಿಲಿನ ಹೊಡೆತದಿಂದ ಜನರು ತತ್ತರಿಸಿ ಹೋಗಿದ್ದಾರೆ.
ಹವಾಮಾನ ಇಲಾಖೆ ರಾಜ್ಯಕ್ಕೆ ಉಷ್ಣ ಮಾರುತದ ಎಚ್ಚರಿಕೆ ನೀಡಿದೆ. ಉತ್ತರ ಕರ್ನಾಟಕದ ಭಾಗಗಳು ಉಷ್ಣ ಮಾರುತಕ್ಕೆ (ಬಿಸಿ ಗಾಳಿ) ತುತ್ತಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇಲ್ಲಿ ಈಗಲೇ ಸೆಕೆಯಿಂದಾಗಿ ಜನ ಒದ್ದಾಡುತ್ತಿದ್ದಾರೆ. ಬಿಸಿ ಗಾಳಿ ಬೀಸಿದರೆ ಪರಿಸ್ಥಿತಿ ಇನ್ನಷ್ಟು ಅಸಹನೀಯವಾಗಬಹುದು. ಉತ್ತರ ಕರ್ನಾಟಕದಲ್ಲಿ ಈ ಸಲ ತಾಪಮಾನ 50 ಸೆಲ್ಶಿಯಸ್ ಡಿಗ್ರಿ ದಾಟಿದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.

ಕರಾವಳಿಯಲ್ಲಿ ಬೆಳಗ್ಗಿನ ಹೊತ್ತಿನಲ್ಲೇ ನಡು ಮಧ್ಯಾಹ್ನದ ಸೆಕೆಯ ಅನುಭವವಾಗುತ್ತಿದೆ. ಅನೇಕ ಕಡೆ ಬಾವಿ, ಕೊಳವೆಬಾವಿ, ನದಿಗಳು ಬತ್ತಿಹೋಗಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಕೃಷಿಭೂಮಿ ಒಣಗಿ ಬಿರುಕು ಬಿಡುತ್ತಿದೆ. ತೆಂಗು, ಕಂಗು, ಬಾಳೆ ಇತ್ಯಾದಿ ಕೃಷಿ ನೀರಿನ ಕೊರತೆಯಿಂದಾಗಿ ಹಳದಿ ಬಣ್ಣಕ್ಕೆ ತಿರುಗುತ್ತಿವೆ.
ಸೆಕೆಯಿಂದಾಗಿ ಎಳನೀರು ಮತ್ತು ಪಾನೀಯಕ್ಕೆ ಭಾರಿ ಬೇಡಿಕೆ ಬಂದಿದೆ. ಜನರು ಟೀ, ಕಾಫಿ ಬದಲಾಗಿ ತಂಪು ಪಾನೀಯಗಳನ್ನು ಹೆಚ್ಚು ಸೇವಿಸುತ್ತಿದ್ದಾರೆ.





