ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ನಾಸೀರ್ ಹುಸೇನ್ ಅವರು ಜಯಗಳಿಸಿದ ವೇಳೆ ವಿಧಾನಸೌಧದಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಮೂವರಿಗೆ ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು (ಎಸಿಎಂಎಂ) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ದಿಲ್ಲಿಯ ಕಿಶನ್‌ಗಂಜ್‌ನ ಮೊಹಮ್ಮದ್ ಇಲ್ತಾಜ್, ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮ್ಮದ್ ಶಫಿ ನಾಶಿಪುಡಿ, ಬೆಂಗಳೂರಿನ ಜಯಮಹಲ್ ನಿವಾಸಿ ಡಿ. ಎಸ್ ಮುನಾವರ್ ಅಹ್ಮದ್ ಜಾಮೀನು ಪಡೆದುಕೊಂಡ ಆರೋಪಿಗಳು.
ಆರೋಪಿಗಳು ರೂ. 1 ಲಕ್ಷ ಮೊತ್ತದ ಮುಚ್ಚಳಿಕೆ ನೀಡಬೇಕು, ಇಬ್ಬರು ವ್ಯಕ್ತಿಗಳು ಜಾಮೀನು ಒದಗಿಸಬೇಕು, ಆರೋಪಿಗಳು ದೇಶ ಬಿಟ್ಟು ಹೋಗಬಾರದು, ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಮತ್ತು ಇಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಕಳೆದ ತಿಂಗಳ 27ರಂದು ವಿಧಾನಸೌಧದಲ್ಲಿ ರಾಜ್ಯಸಭೆ ಚುನಾವಣೆಗೆ ಮತದಾನ ನಡೆದು ಫಲಿತಾಂಶ ಪ್ರಕಟವಾದ ಬಳಿಕ, ವಿಜೇತ ಅಭ್ಯರ್ಥಿ ನಾಸೀರ್ ಹುಸೇನ್ ಪರ ಸಂಭ್ರಮಾಚರಿಸುವ ವೇಳೆ ಆರೋಪಿಗಳು ಪಾಕಿಸ್ಥಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ ಎಂದು ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪಾಕಿಸ್ಥಾನ ಪರ ಘೋಷಣೆ : ಆರೋಪಿಗಳಿಗೆ ಜಾಮೀನು
























