ಪಂಚಾಯತ್‌ ರಾಜ್ ವ್ಯವಸ್ಥೆ ಸದೃಢವಾಗಲಿ – ಕೋಟ ಶ್ರೀನಿವಾಸ ಪೂಜಾರಿ

ಜನರ ಆಶೋತ್ತರ ಈಡೇರಿಸುವ ಕಾರ್ಯವಾಗಲಿ – ಸುನಿಲ್‌ ಕುಮಾರ್‌

ಸಮರ್ಥ ಕಾರ್ಯನಿರ್ವಹಣೆಯಿಂದ ಸ್ಥಳೀಯ ಅಗತ್ಯತೆ ಪೂರೈಕೆ – ಮಂಜುನಾಥ್‌ ಭಂಡಾರಿ

ಕಾರ್ಕಳ : ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಮತ್ತಷ್ಟು ಪ್ರಬಲಗೊಳಿಸುವ ನಿಟ್ಟಿನಲ್ಲಿ ಗ್ರಾ. ಪಂ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಅವರು ಮಾ. 4ರಂದು ಬೈಲೂರು ಗ್ರಾ. ಪಂ. ನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಗ್ರಾ.ಪಂ.ಗಳು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಸ್ವಂತ ಕಟ್ಟಡ ಹೊಂದಿದೆ. ಮುಂದಿನ ವರ್ಷಗಳಲ್ಲಿ ಸ್ಥಳೀಯ ಸರಕಾರವಾಗಿ ಪಂಚಾಯತ್‌ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು. ಚುನಾವಣೆ ಅನಂತರ ಅಭಿವೃದ್ದಿಯೇ ರಾಜಕೀಯವಾಗಬೇಕು ಎನ್ನುವುದು ಸಂವಿಧಾನದ ಆಶಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವಿ. ಸುನಿಲ್‌ ಕುಮಾರ್‌, ತಾಂತ್ರಿಕ ಅಡಚಣೆಯಿಂದಾಗಿ ಬೈಲೂರು ಪಂಚಾಯತ್‌ ಹೊಸ ಕಟ್ಟಡ ನಿರ್ಮಾಣದಲ್ಲಿ ವಿಳಂಬವಾಗಿದೆ. ಗೀತಾ ಆಳ್ವ ಅವರ ಕುಟುಂಬ ನಿವೇಶನ ಒದಗಿಸಿಕೊಟ್ಟಿರುವುದರಿಂದ ಇಲ್ಲೊಂದು ಸುಸಜ್ಜಿತ ಪಂಚಾಯತ್‌ ಕಟ್ಟಡ ನಿರ್ಮಾಣವಾಗುವಂತೆ ಆಗಿದೆ ಎಂದರು. ಕಾರ್ಕಳ ತಾಲೂಕಿನ ಪ್ರತಿಯೊಂದು ಗ್ರಾ. ಪಂ. ಕಟ್ಟಡ ಕೂಡ ಸುವ್ಯವಸ್ಥಿತವಾಗಿದೆ. ಪಂಚಾಯತ್‌ ಸಿಬ್ಬಂದಿ ವರ್ಗ ಜನರ ಆಶೋತ್ತರ ಈಡೇರಿಸುವ ಕಾರ್ಯ ಮಾಡಬೇಕಿದೆ ಎಂದು ಸುನಿಲ್‌ ಕುಮಾರ್‌ ಆಶಿಸಿದರು.

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಗ್ರಾ. ಪಂ. ಸದಸ್ಯರಾಗಿ ಕೆಲಸ ಮಾಡುವುದು ಕಷ್ಟಕರ ಸಂಗತಿ. ಗ್ರಾ. ಪಂ. ಆಡಳಿತ ಹಾಗೂ ಸಿಬ್ಬಂದಿ ವರ್ಗ ಸಮರ್ಥವಾದ ರೀತಿಯಲ್ಲಿ ಕೆಲಸ ಮಾಡಿದರೆ ಸ್ಥಳೀಯ ಅಗತ್ಯತೆಯನ್ನು ಈಡೇರಿಸಬಹುದಾಗಿದೆ. ಸಮಸ್ಯೆಗಳೂ ಇತರೇ ಜನಪ್ರತಿನಿಧಿಗಳ ಬಳಿ ಹೋಗದಂತೆ ತಡೆಯಬಹುದಾಗಿದೆ ಎಂದರು.

2 ವರ್ಷದ ಅನುಭವ
ಪಂಚಾಯತ್‌ ವ್ಯವಸ್ಥೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಆಳವಾದ ಅನುಭವ ಹೊಂದಿದವರಾಗಿದ್ದಾರೆ. ನಾನು ಪರಿಷತ್ ಸದಸ್ಯನಾಗಿ ಕೇವಲ ಎರಡು ವರ್ಷ ಮಾತ್ರ ಕಳೆದಿದೆ ಎಂದು ಮಂಜುನಾಥ ಭಂಡಾರಿ ಹೇಳಿದರು.

ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಮಾತನಾಡಿ, ಎಲ್ಲರ ಸಹಕಾರದಿಂದ ಬೈಲೂರು ಪರಿಸರದಲ್ಲಿ ಸುಂದರ ಕಟ್ಟಡ ನಿರ್ಮಾಣವಾಗಿದೆ. ಪಂಚಾಯತ್‌ ಮಟ್ಟದಲ್ಲಿ ರಾಜಕೀಯ ರಹಿತ ಕಾರ್ಯನಿರ್ವಹಣೆಯಾಗಬೇಕು ಎಂದರು.

ತಾ.ಪಂ. ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಮಾಜಿ ಸದಸ್ಯೆ ನಿರ್ಮಲಾ ರಾಣೆ, ಮುಂಬೈ ಹೈಕೋರ್ಟ್‌ ವಕೀಲರಾದ ಬಿ.ಎನ್.‌ ಪೂಜಾರಿ, ಬೀದಿ ಬೈಲೂರು ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲರಾಜ್‌ ಶೆಟ್ಟಿ, ಉದ್ಯಮಿ ಪ್ರಶಾಂತ್‌ ಶೆಟ್ಟಿ, ಕೃಷ್ಣರಾಜ್‌ ಹೆಗ್ಡೆ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸಚ್ಚಿದಾನಂದ ಶೆಟ್ಟಿ, ಶ್ವೇತಾ ಪಿ. ಶೆಟ್ಟಿ, ಜಗದೀಶ್‌ ಪೂಜಾರಿ, ಉದ್ಯಮಿಗಳಾದ ಜಯ ಪೂಜಾರಿ ಮತ್ತು ಜಯಪ್ರಕಾಶ್‌ ಶೆಟ್ಟಿ, ಪಂಚಾಯತ್‌ ಉಪಾಧ್ಯಕ್ಷ ಸಂತೋಷ್‌ ಸಾಲ್ಯಾನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್‌ ಅಧ್ಯಕ್ಷೆ ಸುಜಾತಾ ಸ್ವಾಗತಿಸಿ, ಗಣೇಶ್‌ ಪ್ರಾರ್ಥಿಸಿದರು. ಸಂಗೀತಾ ನಿರೂಪಿಸಿದರು. ಪಿಡಿಒ ಶ್ರೀ ವಿದ್ಯಾ ವಂದಿಸಿದರು.

ಸನ್ಮಾನ
ಕಟ್ಟಡ ಗುತ್ತಿಗೆದಾರ ರಾಜೇಶ್ ಶೆಟ್ಟಿ, ಪಂಚಾಯತ್‌ಗೆ ವಿವಿಧ ಉಪಕರಣ ನೀಡಿರುವ ಬಿ.ಎನ್.‌ ಪೂಜಾರಿ, ಕೃಷಿ ಇಲಾಖೆ ಅಧಿಕಾರಿ ರಮೇಶ್‌ ಉಳ್ಳಗಡ್ಡಿ, ತೋಟಗಾರಿಕಾ ಸಹಾಯಕ ನಿರ್ದೇಶಕ ಶ್ರೀನಿವಾಸ್‌, ಪಂಚಾಯತ್‌ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಹಾಗೂ ಪಂಚಾಯತ್‌ನಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿರುವ ಪಿಡಿಒ, ಕಾರ್ಯದರ್ಶಿಗಳಿಗೆ ಮತ್ತು ಹಾಲಿ ಪಿಡಿಒ, ಸಿಬ್ಬಂದಿ, ಕಾರ್ಯದರ್ಶಿ, ಎಸ್‌ ಎಲ್‌ ಆರ್‌ ಎಂ ಘಟಕದ ಸಿಬ್ಬಂದಿ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಿಗೆ ಇದೇ ಸಂದರ್ಭ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಗಣೇಶ್‌ ಹಾಗೂ ವಿದ್ಯಾ ತಂಡದಿಂದ ಸಂಗೀತಾ ರಸಮಂಜರಿ, ದೇವದಾಸ್‌ ಕಾಪಿಕಾಡ್‌ ತಂಡದಿಂದ ಪುದರ್‌ ದೀದಾಂಡ್‌ ನಾಟಕ ಪ್ರದರ್ಶನಗೊಂಡಿತು.













































































error: Content is protected !!
Scroll to Top