ತಾಪಮಾನ 2 ಡಿಗ್ರಿ ಏರಿಕೆ : ಸುಡಲಿದೆ ಈ ಸಲದ ಬೇಸಿಗೆ

ಬೆಂಗಳೂರು: ಬೇಸಿಗೆ ಆರಂಭದಲ್ಲೇ ಬಿಸಿಲಿನ ತಾಪಕ್ಕೆ ಜನ ಬಸವಳಿಯುತ್ತಿದ್ದಾರೆ. ಈ ಸಲ ಮಳೆಯೂ ಕಡಿಮೆಯಾಗಿ ಬರದ ಛಾಯೆಯೂ ಇರುವುದರಿಂದ ಬೇಸಿಗೆ ಜನರನ್ನು ಬಹಳಷ್ಟು ಹೈರಣಾಗಿಸುವ ಸಾಧ್ಯತೆ ಇದೆ. ಇದೀಗ ಹವಾಮಾನ ಇಲಾಖೆ ಈ ಬೇಸಿಗೆಯಲ್ಲಿ ಉಷ್ಣತೆ ಮಾಮೂಲಿಗಿಂತ ಎರಡು ಡಿಗ್ರಿ ಸೆಲ್ಶಿಯಸ್‌ ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದು ಈ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ರಾಜ್ಯದಾದ್ಯಂತ ಈಗಾಗಲೇ ಬಿಸಿಲಿನ ಝಳಕ್ಕೆ ಜನ ತತ್ತರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಮತ್ತೆ ಎರಡು ಡಿಗ್ರಿ ಸೆಲ್ಸಿಯಸ್‌ಗಳಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ತಾಪಮಾನ ಕಳೆದ ವರ್ಷ ಫೆಬ್ರವರಿಗಿಂತ 1-2 ಡಿಗ್ರಿ ಹೆಚ್ಚಾಗಿದೆ ಎಂದು ಐಎಂಡಿ ಅಧಿಕಾರಿಗಳು ಗಮನಿಸಿದ್ದಾರೆ.
ಸದ್ಯ ಬೆಂಗಳೂರಿನ ಗರಿಷ್ಠ ತಾಪಮಾನ 31.2 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕಲಬುರಗಿಯಲ್ಲಿ 37 ಡಿಗ್ರಿ ಸೆಲ್ಸಿಯಸ್ ಇದೆ. ಮಾರ್ಚ್ ತಿಂಗಳಿಗೂ ಮುನ್ನ ಮತ್ತಷ್ಟು ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ ಬೆಂಗಳೂರು ಐಎಂಡಿಯ ಹಿರಿಯ ವಿಜ್ಞಾನಿ ಎ. ಪ್ರಸಾದ್.
ಕರಾವಳಿಯಲ್ಲಿ ರಾತ್ರಿ ತುಸು ಚಳಿಯಿದ್ದರೂ ಹಗಲು ಹೊತ್ತು ಬಿಸಿಲು ಸುಡಲಾರಂಭಿಸಿದೆ. ಫೆಬ್ರವರಿಯಲ್ಲೇ ಜನ ವಿಪರೀತ ಸೆಖೆಗೆ ಹೈರಣಾಗಿದ್ದು, ಇನ್ನು ಮೂರು ತಿಂಗಳ ಬೇಸಿಗೆಯನ್ನು ಹೇಗೆ ಕಳೆಯುವುದು ಎಂಬ ಚಿಂತೆಯಲ್ಲಿದ್ದಾರೆ. ಏಪ್ರಿಲ್‌-ಮೇ ತಿಂಗಳಿಗಾಗುವಾಗ ತಾಪಮಾನದಲ್ಲಿ ಇನ್ನೂ ಏರಿಕೆಯಾಗಲಿದೆ.



















































































error: Content is protected !!
Scroll to Top