ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌ ಸೀನಿಯರ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಭಡ್ತಿ

ಕಾರ್ಕಳ : ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಖ್ಯಾತಿಯ ಕಾರ್ಕಳ ಮೂಲದ ಮುಂಬೈ ಪೊಲೀಸ್‌ ಅಧಿಕಾರಿ ದಯಾ ನಾಯಕ್‌ ಸೀನಿಯರ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಪದೋನ್ನತಿ ಹೊಂದಿದ್ದಾರೆ. ಭೂಗತ ಜಗತ್ತಿಗೆ ಸಿಂಹಸ್ವಪ್ನರಾಗಿದ್ದ ದಯಾ ನಾಯಕ್‌ ಅವರು ಮಹಾರಾಷ್ಟ್ರ ಕ್ರೈಂ ಬ್ರಾಂಚ್‌ನಲ್ಲಿ ಇನ್ಸ್‌ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಮುಂಬೈ ಕ್ರೈಂ ಬ್ರಾಂಚ್‌ ಸೀನಿಯರ್‌ ಇನ್ಸ್‌ಪೆಕ್ಟರ್‌ ಆಗಿ ಅಧಿಕಾರ ವಹಿಸಿದ್ದಾರೆ.

85 ಎನ್‌ಕೌಂಟರ್‌
1995ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡ ದಯಾ ನಾಯಕ್‌ 2004ರ ವೇಳೆಗೆ ಮುಂಬೈ ಭೂಗತ ಲೋಕದ 85ಕ್ಕೂ ಹೆಚ್ಚು ಪಾತಕಿಗಳನ್ನು ಇಹಲೋಕ ತ್ಯಜಿಸುವಂತೆ ಮಾಡಿದ್ದರು. ಈ ಮೂಲಕ ಮುಂಬೈ ಜನತೆ, ಪ್ರಮುಖವಾಗಿ ಉದ್ಯಮಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಮೂರು ವರ್ಷಗಳ ಕಾಲ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದಲ್ಲಿ ಕರ್ತವ್ಯ ಸಲ್ಲಿಸಿದ್ದ ಅವರು ಸಮಾಜ ವಿರೋಧಿ ಕೃತ್ಯವೆಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು. ಡ್ರಗ್ಸ್‌ಗೆ ಪ್ರಕರಣಗಳಿಗೆ ಕಡಿವಾಣ ಹಾಕಿದ್ದರು.

ಕಾರ್ಕಳ ಎಣ್ಣೆಹೊಳೆಯವರು
ಕಾರ್ಕಳ ಸಮೀಪದ ಎಣ್ಣೆಹೊಳೆಯ ಬಡ್ಡಾ ನಾಯಕ್‌ ಹಾಗೂ ರಾಧಾ ನಾಯಕ್‌ ದಂಪತಿ ಪುತ್ರರಾಗಿ ಜನಿಸಿರುವ ದಯಾ ನಾಯಕ್‌ ತನ್ನ ಪ್ರಾಥಮಿಕ ಶಿಕ್ಷಣವನ್ನು ಎಣ್ಣೆಹೊಳೆಯಲ್ಲಿ ಪೂರೈಸಿದ್ದರು. ಬಳಿಕ ಉದ್ಯೋಗ ಅರಸಿ ಮುಂಬೈಯತ್ತ ಮುಖ ಮಾಡಿದ ಅವರು ಅಲ್ಲಿ ಕ್ಯಾಂಟೀನ್‌ ಸೇರಿದರು. ಬಹಳ ಕಷ್ಟದಿಂದಲೇ ಓದು ಮುಂದುವರಿಸಿ ಮುಂಬೈನಲ್ಲೇ ಪದವಿ ಪಡೆದರು. ಅನಂತರ ಪ್ಲಂಬರ್‌ ಸೂಪರ್‌ವೈಸರ್‌ ಆಗಿ ವೃತ್ತಿ ಜೀವನ ಆರಂಭಿಸಿದ ದಯಾನಾಯಕ್‌ 1995ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡರು.

ಹುಟ್ಟೂರಿನಲ್ಲಿ ಶಾಲೆ ಸ್ಥಾಪನೆ
ಕಡು ಬಡತನದಲ್ಲಿ ಓದಿ, ಬೆಳೆದಿರುವ ದಯಾನಾಯಕ್‌ ತನ್ನೂರಿನ ಮಕ್ಕಳು ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ಯಾವೊಂದು ತೊಂದರೆ ಅನುಭವಿಸಬಾರದೆಂಬ ಉದ್ದೇಶದಿಂದ ಎಣ್ಣೆಹೊಳೆಯಲ್ಲಿ ತನ್ನ ತಾಯಿ ಹೆಸರಲ್ಲಿ ರಾಧಾ ನಾಯಕ್‌ ಪ್ರೌಢಶಾಲೆ‌ (2000 ಇಸವಿ) ಸ್ಥಾಪಿಸಿದ್ದರು. ಅತ್ಯಂತ ಸುಂದರ, ಸುಸಜ್ಜಿತವಾಗಿ ನಿರ್ಮಾಣವಾಗಿರುವ ಈ ಶಾಲೆಯ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್‌ ತಾರೆಯರಾದ ಅಮಿತಾಬ್ ಬಚ್ಚನ್‌, ಸುನಿಲ್‌ ಶೆಟ್ಟಿ, ಅಫ್ತಬ್‌ ಶಿವದಾಸನಿ, ಪಕ್ಷಿ ತಜ್ಞ ಎಂ.ಎಫ್.‌ ಹುಸೇನ್‌ ಆಗಮಿಸಿದ್ದರು. ದಯಾನಾಯಕ್ ಅವರ ಜೀವನ, ಸಾಧನೆ ಕುರಿತು ವಿವಿಧ ಭಾಷೆಗಳಲ್ಲಿ ಹತ್ತಾರು ಸಿನೆಮಾ, ಧಾರಾವಾಹಿಗಳು ನಿರ್ಮಾಣವಾಗಿರುವುದೇ ಅವರ ಸಾಧನೆಗೆ ಸಾಕ್ಷಿ.































































































error: Content is protected !!
Scroll to Top