ಸಿಎಂ ಸಿದ್ದರಾಮಯ್ಯ ಒಳಗೊಂಡಂತೆ ವಿವಿಧ ನಾಯಕರ ಪ್ರಣಾಳಿಕೆ ಸಮಿತಿ ರಚನೆ
ದೆಹಲಿ : ಲೋಕಸಭೆ ಚುನಾವಣೆ ಎದುರಾಗುತ್ತಿದ್ದಂತೆ ಕಾಂಗ್ರೆಸ್ ಜೋಡೋ ಯಾತ್ರೆ, ನ್ಯಾಯ ಯಾತ್ರೆ ಸೇರಿದಂತೆ ಜನತೆಯನ್ನು ತಲುಪುವಂತಹ ಹೊಸ ಹೊಸ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಇದೀಗ ಚುನಾವಣಾ ಪ್ರಣಾಳಿಕೆ ರೂಪಿಸಲು ಕಾಂಗ್ರೆಸ್ ಜನರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಿದೆ.
ಪ್ರಣಾಳಿಕೆ ರೂಪಿಸುವ ಸಮಿತಿಯ ಜವಾಬ್ದಾರಿ ಹೊತ್ತಿರುವ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರು ‘ಪ್ರತಿ ರಾಜ್ಯದಲ್ಲಿಯೂ ಪ್ರಣಾಳಿಕೆ ಸಮಿತಿಯು ಜನರೊಂದಿಗೆ ಸಂವಾದ ನಡೆಸಲಿದೆ. ಜನರ ಸಲಹೆ- ಸೂಚನೆ ಪಡೆಯಲು ಇ- ಮೇಲ್ ಹಾಗೂ ವೆಬ್‌ಸೈಟ್ ವಿಳಾಸ ರೂಪಿಸಲಾಗಿದೆ. awaazbharatki@inc.in ಇಮೇಲ್ ಮೂಲಕ ಇಲ್ಲವೇ http://www.awaazbharatki.in ವೆಬ್‌ಸೈಟ್ ಮೂಲಕ ಜನರು ಸಲಹೆ ಸೂಚನೆಗಳನ್ನು ಸಲ್ಲಿಸಬಹುದು. ಇದರ ಆಧಾರದ ಮೇಲೆ ಪಕ್ಷವು ಪ್ರಣಾಳಿಕೆಯನ್ನು ಸಿದ್ಧಪಡಿಸಲಿದೆ. ಇದು ಕಾಂಗ್ರೆಸ್ ಪ್ರಣಾಳಿಕೆಯಲ್ಲ, ಜನರ ಪ್ರಣಾಳಿಕೆ ಎನಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

16 ಜನರ ಸಮಿತಿಯು ಕರ್ನಾಟಕ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಒಳಗೊಂಡಿದೆ. ಮಾಜಿ ಕೇಂದ್ರ ಸಚಿವರಾದ ಜೈರಾಮ್ ರಮೇಶ್, ಆನಂದ್ ಶರ್ಮಾ, ಶಶಿ ತರೂರ್, ಲೋಕಸಭೆಯಲ್ಲಿನ ಪಕ್ಷದ ಉಪ ನಾಯಕ ಗೌರವ್ ಗೊಗೊಯ್ ಮತ್ತು ಗುಜರಾತ್ ಕಾಂಗ್ರೆಸ್ ನಾಯಕ ಜಿಗ್ನೇಶ್ ಮೇವಾನಿ ಅವರು ಸಮಿತಿಯಲ್ಲಿದ್ದಾರೆ. ಈ ಸಮಿತಿಯು ಜನರಿಂದ ಸಾಧ್ಯವಾದಷ್ಟು ಸಲಹೆಗಳನ್ನು ಸ್ವೀಕರಿಸಲಿದೆ.


































