ಸುಳ್ಯ : ಅಡಿಕೆಯ ಹಳದಿ ರೋಗದ ಕಾಟದಿಂದ ಬೇಸತ್ತ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದಲ್ಲಿ ಸಂಭವಿಸಿದೆ. ಹಳದಿ ರೋಗಕ್ಕೆ ಔಷಧ ಸಿಂಪಡಿಸಿದರೂ ಕಡಿಮೆಯಾಗದ ಕಾರಣ ಮನನೊಂದು ಸುಳ್ಯ ಆಲೆಟ್ಟಿ ಗ್ರಾಮದ ರೈತ ಗೂಡಿಂಜದ ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಲೆಟ್ಟಿ ಗ್ರಾಮದ ಬಡ್ಡಡ್ಕ ಚಳ್ಳಂಗಾರ್ ರಾಮಣ್ಣ ಅವರ ಪುತ್ರ ಜಗದೀಶ್ (56) ಆತ್ಮಹತ್ಯೆ ಮಾಡಿಕೊಂಡ ರೈತ.
ಜಗದೀಶ್ ಜ.3ರಂದು ಮನೆಯಿಂದ ಸುಳ್ಯಕ್ಕೆಂದು ಹೋದವರು ಮನೆಗೆ ಮರಳಿ ಬರದ ಹಿನ್ನಲೆಯಲ್ಲಿ ಮನೆಯವರು ಜ.4ರಂದು ಆಲೆಟ್ಟಿ ಗ್ರಾಮದ ಗೂಡಿಂಜದ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅವರು ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಒಂದು ವರ್ಷದಿಂದ ತೋಟಕ್ಕೆ ಹಳದಿರೋಗ ಬಂದಿದ್ದು, ಎಷ್ಟೇ ಔಷಧ ಸಿಂಪಡಿಸಿದರೂ ನಿಯಂತ್ರಣಕ್ಕೆ ಬಂದಿರಲಿಲ್ಲ. ಇದರಿಂದಾಗಿ ಭವಿಷ್ಯದ ಬಗ್ಗೆ ಚಿಂತೆಗೀಡಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

































