ವಿಜಯಪುರ : ಬೆಳ್ಳಂಬೆಳಿಗ್ಗೆ ಜನತಾ ಟ್ರಾವೆಲ್ಸ್‌ಗೆ ಸೇರಿದ ಬಸ್ಸು ನಡು ರಸ್ತೆಯಲ್ಲೇ ಹೊತ್ತಿ ಉರಿದು ಸುಟ್ಟು ಕರಕಲಾದ ಘಟನೆ ವಿಜಯಪುರ ತಾಲೂಕಿನ ಹಿಟ್ಟನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಬೆಂಗಳೂರಿನಿಂದ ವಿಜಯಪುರಕ್ಕೆ ಆಗಮಿಸುತ್ತಿದ್ದ ಖಾಸಗಿ ಬಸ್ ಒಂದು ರಸ್ತೆಮಧ್ಯೆ ಹೊತ್ತಿ ಉರಿದ ಘಟನೆ ನಡೆದಿದ್ದು ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಪಾರಾಗಿದ್ದಾರೆ. ಟಯರ್‌ಗೆ ಬೆಂಕಿ ತಗುಲಿದ ಕಾರಣ ಬೆಂಕಿ ಹತ್ತಿಕೊಂಡಿದ್ದು, ಚಾಲಕ ಬಸ್ ನಿಲ್ಲಿಸಿದ ತಕ್ಷಣ ಪ್ರಯಾಣಿಕರು ಕೆಳಗಿಳಿದರು.
ಪ್ರಯಾಣಿಕರು ಬಸ್‌ನಿಂದ ಕೆಳಗಿಳಿಯವಷ್ಟರಲ್ಲೇ ಬೆಂಕಿ ಹತ್ತಿಕೊಂಡಿದ್ದರಿಂದ ಲಗೇಜ್‌ಗಳನ್ನು ಉಳಿಸಿಕೊಳ್ಳಲಾಗಲಿಲ್ಲ. ಬೆಲೆ ಬಾಳುವ ವಸ್ತುಗಳು, ಬಟ್ಟೆಗಳು, ನಗದು ಒಡವೆ ಲಗೇಜ್ ನಲ್ಲಿ ಇದ್ದವು ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು, ಅಗ್ನಿ ಶಾಮಕದಳದ ಸಿಬ್ಬಂದಿ ದೌಡಾಯಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

































