370ನೇ ವಿಧಿ ರದ್ದತಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ದೆಹಲಿ : ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಲಾಗಿದ್ದ ಸಂವಿಧಾನದ ಆರ್ಟಿಕಲ್ 370 ವಿಧಿ ರದ್ದು ಮಾಡಿದ್ದ ಕೇಂದ್ರ ಸರಕಾರದ ನಿರ್ಧಾರ ಸರಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆರ್ಟಿಕಲ್ 370 ಅಡಿ ವಿಶೇಷಾಧಿಕಾರ ನೀಡಿಕೆ ಕೇವಲ ತಾತ್ಕಾಲಿಕ ನಿರ್ಧಾರವಷ್ಟೇ ಆಗಿತ್ತು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಸಂವಿಧಾನದ ಆರ್ಟಿಕಲ್ 370 ವಿಧಿಯನ್ನು 2019ರಲ್ಲಿ ರದ್ದು ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಸರ್ವೋಚ್ಛ ನ್ಯಾಯಾಲಯ ಈ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕೃಷ್ಣ ಕೌಲ್, ಸಂಜೀವ್ ಖನ್ನಾ, ಬಿ. ಆರ್. ಗವಾಯಿ ಹಾಗೂ ಜಸ್ಟೀಸ್ ಸೂರ್ಯ ಕಾಂತ್ ಅವರಿದ್ದ ಪೀಠ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ಯುದ್ಧದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಲಾಗಿತ್ತು ಎಂದಿರುವ ಸುಪ್ರೀಂ ಕೋರ್ಟ್‌, ಆರ್ಟಿಕಲ್ 370 ರದ್ದತಿಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿದೆ. ಇನ್ನು ಕೇಂದ್ರ ಸರಕಾರಕ್ಕೆ, ರಾಷ್ಟ್ರಪತಿಗಳಿಗೆ ಆರ್ಟಿಕಲ್ 370 ರದ್ದತಿ ಅಧಿಕಾರ ಇದೆ. ರಾಷ್ಟ್ರಪತಿಗಳ ನಿರ್ಧಾರವೂ ಸುಪ್ರೀಂ ಕೋರ್ಟ್‌ನ ಪರಾಮರ್ಶೆಗೆ ಒಳಪಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಇದ್ದಾಗ ರಾಜ್ಯದಲ್ಲಿ ವಿಧಾನಸಭೆಯೇ ಇರಲಿಲ್ಲ ಎಂದು ಭಾವಿಸಬಾರದು ಎಂದಿರುವ ಸುಪ್ರೀಂ ಕೋರ್ಟ್‌, ಕರ್ನಾಟಕದ ಎಸ್‌. ಆರ್. ಬೊಮ್ಮಾಯಿ ಪ್ರಕರಣ ಉಲ್ಲೇಖಿಸಿದೆ. ಅಷ್ಟೇ ಅಲ್ಲ, ಸೆಪ್ಟೆಂಬರ್‌ 30ರ ಒಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಬೇಕು ಹಾಗೂ ಆದಷ್ಟು ಬೇಗ ರಾಜ್ಯದ ಸ್ಥಾನಮಾನ ನೀಡಬೇಕು ಎಂದೂ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.







































































error: Content is protected !!
Scroll to Top