ತಜ್ಞ ವೈದ್ಯರಿಂದ ಗುಣಮಟ್ಟದ ನೇತ್ರ ಚಿಕಿತ್ಸೆ : ಅಶೋಕ್ ಅಡ್ಯಂತಾಯ
ಕಾರ್ಕಳ : ಪ್ರಸಾದ್ ನೇತ್ರಾಲಯವು ಸಮಾಜಮುಖಿ ಕಾರ್ಯ ನಡೆಸುತ್ತಿದೆ. ತಜ್ಞ ವೈದ್ಯರಿಂದ ಅಂತರಾಷ್ಟ್ರೀಯ ಗುಣಮಟ್ಟದ ಕಣ್ಣಿನ ಚಿಕಿತ್ಸೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಂತಿನಿಕೇತನ ಚಾರಿಟೇಬಲ್ ಫೌಂಡೇಶನ್ನಿನ ಅಧ್ಯಕ್ಷ ಅಶೋಕ್ ಅಡ್ಯಂತಾಯ ತಿಳಿಸಿದರು.
ಅವರು ಡಿ. 10ರಂದು ಬೋಳ ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಹಾಗೂ ಕಾರ್ಕಳ ಶಾಂತಿನಿಕೇತನ ಚಾರಿಟೇಬಲ್ ಫೌಂಡೇಶನ್‌ನ ಸಹಯೋಗದಲ್ಲಿ ಜರುಗಿದ ಉಚಿತ ಕಣ್ಣಿನ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಗುಣಮಟ್ಟದ ನೇತ್ರ ಚಿಕಿತ್ಸೆ ಒದಗಿಸಿಕೊಡುವ ನಿಟ್ಟಿನಲ್ಲಿ ಈ ಶಿಬಿರ ಆಯೋಜಿಸಲಾಗಿದೆ. ವೈದ್ಯರ ಸಲಹೆ ಮೇರೆಗೆ ಉಚಿತ ಕನ್ನಡಕದ ಫಲಾನುಭವಿಗಳಿಗೆ ಡಿ. 30 ರಂದು ಜರುಗುವ ಶಾಲಾ ವಾರ್ಷಿಕೋತ್ಸವದಂದು ಉಚಿತ ಕನ್ನಡಕ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಪ್ರಸಾದ್ ನೇತ್ರಾಲಯದ ಡಾ. ಅಭಿಷೇಕ್ ಮಾತನಾಡಿ, ಸುತ್ತಲಿನ ಸುಂದರ ಜಗತ್ತನ್ನು ನೋಡಲು ನಮಗೆ ಕಣ್ಣು ಎಷ್ಟು ಮುಖ್ಯವೋ ಅದರ ಆರೈಕೆಯು ಅಷ್ಟೇ ಮಹತ್ವದ್ದಾಗಿದೆ. ಕಣ್ಣುಗಳಲ್ಲಿ ಯಾವುದೇ ದೋಷವಿದ್ದರೂ, ಪ್ರಾಥಮಿಕ ಹಂತದಲ್ಲಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ಆದುದರಿಂದ ಇಂದಿನ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಶಿಬಿರದಲ್ಲಿ ಭಾಗವಹಿಸಿದ ಗ್ರಾಮದ ಜನತೆಗೆ ತಿಳಿಸಿದರು. ಬಳಿಕ ನೇತ್ರ ಚಿಕಿತ್ಸೆ ಮತ್ತು ನೇತ್ರದಾನದ ಮಹತ್ವವನ್ನು ತಿಳಿಸಿದರು.
ವೇದಿಕೆಯಲ್ಲಿ ಅಕ್ಷಯ್ ಅಡ್ಯಂತಾಯ, ಕರುಣಾಕರ ಶೆಟ್ಟಿ, ಅಂತರಾಷ್ಟ್ರೀಯ ಕ್ರೀಡಾಪಟು ಬಾಬು ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ವಂದನಾ ಹರೀಶ್ ಉಪಸ್ಥಿತರಿದ್ದರು. ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕ ವೃಂದ ಹಾಗೂ ಪೋಷಕರು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. 120 ಮಂದಿ ಶಿಬಿರದ ಪ್ರಯೋಜನ ಪಡೆದು, 20 ಮಂದಿಗೆ ಕಣ್ಣಿನ ಪೊರೆ ಚಿಕಿತ್ಸೆ ಮತ್ತು 39 ಮಂದಿಗೆ ಕನ್ನಡಕದ ಅವಶ್ಯಕತೆಯ ಬಗ್ಗೆ ವೈದ್ಯರು ಸೂಚಿಸಿದರು.


































