ಶ್ರೀಮಂತರ ಮಕ್ಕಳು ಕಾಣುವುದಕ್ಕಿಂತ ಹೆಚ್ಚು ಶ್ರೀಮಂತ ಕನಸುಗಳನ್ನು ಬಡವರ ಮಕ್ಕಳು ಕಾಣುತ್ತಾರೆ
ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚು-ನಮ್ಮ ಹಿರಿಯರು ತುಂಬಾ ಆಸೆ ಪಡಬೇಡ, ಇರೋದರಲ್ಲಿ ನೆಮ್ಮದಿಯಿಂದ ಬದುಕು ಎಂಬ ಆಶಯದಲ್ಲಿ ಈ ಗಾದೆಯನ್ನು ಹೆಣೆದರು. ಆದರೆ ದೊಡ್ಡ ಕನಸು ಕಾಣುವುದು ಬೇಡ ಎಂದು ಯಾವತ್ತೂ ಹೇಳಲಿಲ್ಲ.
‘ಗುಡಿಸಲಲ್ಲಿ ಪ್ರತಿಭೆಗಳು ಹುಟ್ಟುತ್ತವೆ ಮತ್ತು ಅರಮನೆಯಲ್ಲಿ ಸಾಯುತ್ತವೆ’ ಎಂದು ಶೇಕ್ಸಪಿಯರ್ ಹೇಳಿದ್ದಾನೆ. ಎಲ್ಲರ ಕನಸುಗಳೂ ಹಾಗೆ. ಶ್ರೀಮಂತರ ಮಕ್ಕಳು ಕಾಣುವುದಕ್ಕಿಂತ ಹೆಚ್ಚು ಶ್ರೀಮಂತ ಕನಸುಗಳನ್ನು ಬಡವರ ಮಕ್ಕಳು ಕಾಣುತ್ತಾರೆ ಅಂತ ಒಂದು ಸಂಶೋಧನೆಯು ನಮಗೆ ತೋರಿಸಿಕೊಟ್ಟಿದೆ. ಪ್ರತಿಭೆಗೆ ಶ್ರೀಮಂತಿಕೆ, ಬಡತನ ಎಂಬ ಬೇಧ ಇಲ್ಲ. ಶ್ರೀಮಂತರ ಮಕ್ಕಳು ಕೂಡ ಅದ್ಭುತ ಪ್ರತಿಭೆ ಹೊಂದಿದವರು ಇದ್ದಾರೆ.
ಆದರೆ ಅವರು ತಮ್ಮ ಅಪ್ಪ ಅಮ್ಮ ತೋರಿಸಿ ಕೊಟ್ಟಿರುವ ‘ಕಂಫರ್ಟ್ ಝೋನ್ ‘ದಾಟಲು ಹಿಂಜರಿಯುತ್ತಾರೆ. ರಿಸ್ಕ್ ತೆಗೆದುಕೊಳ್ಳಲು ಹೋಗುವುದೇ ಇಲ್ಲ.
ಆದರೆ ಬಡವರ ಮಕ್ಕಳು ಶೂನ್ಯದಿಂದ ಎಲ್ಲವನ್ನೂ ಕ್ರಿಯೇಟ್ ಮಾಡಬೇಕಾದ ಕಾರಣ ಹೋರಾಟದ ಹಾದಿ ಹಿಡಿಯುತ್ತಾರೆ ಮತ್ತು ಎಲ್ಲವನ್ನೂ ಬೆವರು ಬಸಿದು ಸಂಪಾದನೆ ಮಾಡುತ್ತಾರೆ. ಅವರಿಗೆ ಹೆಚ್ಚು ಸಾಮಾಜಿಕ ಎಕ್ಸಪೋಷರ್ ಇರುವ ಕಾರಣ ಸೋಲುವ ಭಯ ಕಡಿಮೆ ಇರುತ್ತದೆ. ಸೋತರೂ ಅವರಿಗೆ ಅಲ್ಲಿಂದ ಹೇಗೆ ಎದ್ದು ಬರಬೇಕು ಎಂದು ಗೊತ್ತಿರುತ್ತದೆ. ‘ರಿಸ್ಕ್ ಫ್ಯಾಕ್ಟರ್’ ಅವರಿಗೆ ತೊಂದರೆ ಕೊಡುವುದಿಲ್ಲ

ಗೆದ್ದವರಲ್ಲಿ ಶೇ.83 ಮಂದಿ ಅಂತವರೆ ಆಗಿರುತ್ತಾರೆ
ಒಂದು ಜಾಗತಿಕ ಮಟ್ಟದ ಸಮೀಕ್ಷೆಯ ಫಲಿತಾಂಶ ನಾನು ನಿಮಗೆ ಹೇಳಬೇಕು. ಒಂದು ಸಂಸ್ಥೆ ವೋಟಿಂಗ್ ಮೂಲಕ ಜಗತ್ತಿನ ನೂರು ಜನ ಮಹಾ ಸಾಧಕರ ಪಟ್ಟಿಯನ್ನು ಮಾಡಿತು. ನಂತರ ಅವರ ಬದುಕಿನ ಹಿನ್ನೆಲೆಗಳನ್ನು ಅಧ್ಯಯನ ಮಾಡಲಾಯಿತು. ಆಗ ತಿಳಿದು ಬಂದ ಈ ಅಂಶಗಳು ನಿಜಕ್ಕೂ ನಮ್ಮನ್ನು ಬೆಚ್ಚಿ ಬೀಳಿಸುತ್ತವೆ.
ಆ ನೂರು ಮಂದಿಯಲ್ಲಿ 83 ಜನರು ಮಧ್ಯಮ ಮತ್ತು ಕೆಳ ಮಧ್ಯಮ ಕುಟುಂಬಗಳ ಹಿನ್ನೆಲೆಯಿಂದ ಬಂದವರು. ಹೆಚ್ಚಿನವರು ಬಾಲ್ಯದಲ್ಲಿ ಅಪ್ಪನ ಅಥವಾ ಅಮ್ಮನ ಪ್ರೀತಿಯಿಂದ ವಂಚಿತರಾದವರು. ಶಿಕ್ಷಣ ಪಡೆಯಲು ಭಾರಿ ಹೋರಾಟ ಮಾಡಿದವರು. ಹಸಿವು, ಬಡತನ, ಅಪಮಾನ ಎಲ್ಲವನ್ನೂ ಅನುಭವಿಸಿದವರು. ಅದರಲ್ಲಿಯೂ 13 ಮಂದಿ ತುಳಿತಕ್ಕೆ ಒಳಗಾದ ಮೂಲಗಳಿಂದ ಬಂದವರು.

ಬಡವರ ಮಕ್ಕಳಿಗೆ ಸೌಕರ್ಯ, ಸಪೋರ್ಟ್ ಕಡಿಮೆ ಇರಬಹುದು
ಶ್ರೀಮಂತ ಮಕ್ಕಳಲ್ಲಿಯೂ ಅದ್ಭುತ ಪ್ರತಿಭೆ ಇರುತ್ತದೆ. ಆದರೆ ಅವರು ಹೆಚ್ಚು ಸ್ಟೂಡಿಯಸ್ ಆಗಿರಬೇಕು ಎಂದು ಅವರ ಪೋಷಕರು ಭಾವಿಸುತ್ತಾರೆ. ಅವರಿಗೆ ಮಕ್ಕಳ ಶಿಕ್ಷಣವೂ ಒಂದು ಪ್ರೆಸ್ಟೀಜ್ ವಿಷಯವಾಗಿರುತ್ತದೆ. ನನ್ನ ಮಗ ಆ ಸೆಂಟ್ರಲ್ ಶಾಲೆಯಲ್ಲಿ ಓದುತ್ತಿದ್ದಾನೆ, ಈ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದಾನೆ ಅನ್ನೋದು ಅವರಿಗೆ ಒಂದು ಜಾಹೀರಾತು ಇದ್ದಂತೆ. ಹೆತ್ತವರ ಇಗೋ ಎಷ್ಟಿರುತ್ತದೆ ಅಂದರೆ ಅವರ ಮಕ್ಕಳು ಎಲ್ಲ ಕಡೆಯೂ ಗೆಲ್ಲುತ್ತಾ ಇರಬೇಕು, ಎಲ್ಲಿಯೂ ಸೋಲಬಾರದು ಎಂಬ ವಿಪರೀತ ಎನಿಸುವಷ್ಟು ಕಾಳಜಿ ಮಾಡುತ್ತಾರೆ. ಮಕ್ಕಳು ಕೂಡ ತಾವು ಗೆಲ್ಲಲು ಮಾತ್ರ ಹುಟ್ಟಿದವರು ಎಂದು ಭ್ರಮೆಗಳ ಮಧ್ಯೆಯೇ ಬದುಕುತ್ತಾರೆ. ನಾನು ಹೇಳುವ ಎಲ್ಲ ಅಂಶಗಳಿಗೂ ಅಪವಾದಗಳು ಇವೆ ಅನ್ನೋದು ಖಂಡಿತವಾಗಿ ಹೌದು. ಆದರೆ ಹೆಚ್ಚಿನ ಶ್ರೀಮಂತ ಹೆತ್ತವರು ಮತ್ತು ಮಕ್ಕಳು ನಾನು ಮೇಲೆ ಹೇಳಿದ ಹಾಗೆಯೇ ಇರುತ್ತಾರೆ.
ವೈಭವದ ಶಾಲೆಗಳು ಹೇಗಿರುತ್ತವೆ?
ಆ ಶಾಲೆಗಳು ಹೇಗಿರುತ್ತವೆ ಎಂಬುದನ್ನು ನಾನು ನಿಮಗೆ ಮತ್ತೆ ವಿವರಿಸಿ ಹೇಳುವ ಅಗತ್ಯ ಇಲ್ಲ. ಅವುಗಳಿಗೂ ಮಕ್ಕಳ ಪ್ರತಿಭೆಗಳು ಜಾಹೀರಾತು ಸರಕು ಅಷ್ಟೇ. ಅಲ್ಲಿ ಶಿಕ್ಷಣ ಒಂದು ವ್ಯಾಪಾರ ಅಷ್ಟೇ. ಮಕ್ಕಳನ್ನು ಉದ್ಯೋಗಕ್ಕೆ ಅಥವಾ ಉದ್ಯಮಕ್ಕೆ ಪ್ರಿಪೇರ್ ಮಾಡುವ ಕಾರ್ಖಾನೆಗಳು ಅವು.
ಅಲ್ಲಿ ಎಲ್ಲ ಸ್ಪರ್ಧೆಗಳಿಗೆ ಮಕ್ಕಳನ್ನು ರೆಡಿ ಮಾಡಲು ಅಂತಾರಾಷ್ಟ್ರೀಯ ಕೋಚ್ ಇರುತ್ತಾರೆ. ಒಂದೊಂದು ಟ್ಯಾಲೆಂಟ್ ಹುಡುಕಲು ಮೆಂಟರ್ ಇರುತ್ತಾರೆ. ಆದರೆ ಸೋಲುವ ಕಡೆಯಲ್ಲಿ ತಪ್ಪಿಯೂ ಆ ಮಕ್ಕಳು ಹೋಗುವುದಿಲ್ಲ. ಮಕ್ಕಳು ಹೋಗಲು ಆಸೆಪಟ್ಟರೂ ಹೆತ್ತವರು ಬಿಡುವುದಿಲ್ಲ. ಈ ನಿಯಮಕ್ಕೆ ಕೂಡ ಅಪವಾದಗಳು ಖಂಡಿತ ಇರಬಹುದು. ಆದರೆ ಮೆಜಾರಿಟಿ ನೋಡಿದಾಗ ನಾನು ಮೇಲೆ ಹೇಳಿದ್ದು ತುಂಬಾ ಸತ್ಯ ಆಗಿರುತ್ತದೆ.

ಕೊಳಚೆಗೇರಿಯಲ್ಲಿಯೂ ಕನಸುಗಳು ಮೊಳೆಯುತ್ತವೆ
ನಾನು ಸಹಜವಾದ ಕುತೂಹಲದಿಂದ ಹಲವು ಕೊಳಚೆಗೇರಿ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದೇನೆ. 10×10 ಚದರಡಿ ವಿಸ್ತೀರ್ಣದ ಸಣ್ಣ ಸಣ್ಣ ಉಸಿರು ಕಟ್ಟುವ ಗುಡಿಸಲುಗಳಲ್ಲಿ ವಾಸ ಮಾಡುವ ಆ ಹೆತ್ತವರೂ ತಮ್ಮ ಮಕ್ಕಳ ಬಗ್ಗೆ ದೊಡ್ಡ ಕನಸು ಕಾಣುತ್ತಾರೆ ಮತ್ತು ಅದನ್ನು ಪದೇಪದೆ ಹೇಳಿ ಕನಸುಗಳನ್ನು ಅವರ ಮಕ್ಕಳ ಸುಪ್ತ ಮನಸ್ಸುಗಳಿಗೆ
ದಾಟಿಸುತ್ತಾರೆ. ಆ ಮಕ್ಕಳೂ ತಮ್ಮದೇ ಆದ ಕನಸುಗಳನ್ನು ಹೊಂದಿರುತ್ತಾರೆ. ಅವರಿಗೆ ಸೌಕರ್ಯಗಳ ಕೊರತೆ ಕಾಡುವುದೆ ಇಲ್ಲ. ಅವಕಾಶಗಳ ಕೊರತೆ ಬಗ್ಗೆ ಅವರು ಗೊಣಗುವುದೂ ಇಲ್ಲ. ಅವರ ಕನಸುಗಳನ್ನು ಬೆಳೆಸುವ ಸರಕಾರಿ ಶಾಲೆಗಳು ಇವೆ. ಆ ಶಾಲೆಗಳಲ್ಲಿ ಕೂಡ ಪರಿಣತ ಮತ್ತು ಶ್ರೇಷ್ಠ ತರಬೇತು ಪಡೆದ ಶಿಕ್ಷಕರು ಇರುತ್ತಾರೆ. ಮಕ್ಕಳಿಗೆ ಪ್ರತಿಭಾ ಕಾರಂಜಿ, ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಕ್ರೀಡಾಕೂಟಗಳು ಇರುತ್ತವೆ. ಒಂದಿಷ್ಟು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುತ್ತವೆ. ಸಂಗೀತ, ನಾಟಕ ತರಬೇತಿಗಳು ಇತ್ತೀಚೆಗೆ ದೊರೆಯುತ್ತಿವೆ. ಅದರಿಂದಾಗಿ ಮಕ್ಕಳು ಉತ್ಸಾಹದಲ್ಲಿ ಕ್ರಿಯಾಶೀಲವಾಗಿ ಅರಳುತ್ತಾರೆ.
ಭರತವಾಕ್ಯ
ತೀವ್ರ ಬಡತನ, ಹಸಿವು, ಅಪಮಾನಗಳ ನಡುವೆ ಕೂಡ ಸಾಧನೆ ಮಾಡಿ ಎದ್ದು ನಿಂತ ನೂರಾರು ಮಕ್ಕಳ ಪ್ರತಿಭೆಗಳನ್ನು ಗಮನಿಸಿ ನಾನು ಈ ವಾಕ್ಯಗಳನ್ನು ಬರೆಯುತ್ತಿದ್ದೇನೆ. ಆರ್ಥಿಕವಾಗಿ ಹಿಂದುಳಿದ ಇಂತಹ ಮಕ್ಕಳಿಗೆ ಒಂದಿಷ್ಟು ಧೈರ್ಯ ತುಂಬಿದರೆ, ಸಣ್ಣಗೆ ಒಂದು ಸಪೋರ್ಟ್ ಸಿಸ್ಟಮ್ ರೂಪಿಸಿದರೆ, ಒಂದಿಷ್ಟು ಮೆಂಟರಿಂಗ್ ಮಾಡಿದರೆ ಆ ಮಕ್ಕಳು ಕೂಡ ಅದ್ಭುತಗಳನ್ನು ಸಾಧಿಸುತ್ತಾರೆ ಎನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ.
