ಅಜೆಕಾರು ಕೊಲೆ ಆರೋಪಿ ಖುಲಾಸೆ

ಅಜೆಕಾರು: ಅಜೆಕಾರು ಹಾಡಿಯಂಗಡಿಯಲ್ಲಿ 2021ನೇ ಇಸವಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದ ಹರೀಶ ಶೇರ್ವೇಗಾರ (28) ಎಂಬ ಯುವಕನನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಸಂಚಾರಿ ಪೀಠ) ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫ‌ಲವಾದ ಹಿನ್ನೆಲೆಯಲ್ಲಿ ದೋಷಮುಕ್ತಗೊಳಿಸಿದೆ.

2021ರಮೇ 19ರ ರಾತ್ರಿ ಒಂಟಿಯಾಗಿ ವಾಸವಿದ್ದ ಮನೆಯ ವರಾಂಡದಲ್ಲಿ ಆನಂದ ಶೇರ್ವೇಗಾರ (63) ಅವರ ಶವ ಪತ್ತೆಯಾಗಿತ್ತು. ಅದು ಕೊಲೆ ಎಂಬ ಅನುಮಾನ ಇದ್ದ ಹಿನ್ನೆಲೆಯಲ್ಲಿ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನಂದ ಶೇರ್ವೇಗಾರ್‌ ಅವರು ತನ್ನ ನಾಲ್ಕು ಎಕರೆ ಜಮೀನನ್ನು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಗಣೇಶ್‌ ರಾವ್‌ ಮತ್ತು ಇತರ ಇಬ್ಬರಿಗೆ ಮಾರಾಟ ಮಾಡಿದ್ದರು. ಪತ್ನಿ ಮತ್ತು ಮಕ್ಕಳಿಂದ ಬೇರ್ಪಟ್ಟು ಪೂರ್ವಿಕರ ಮನೆಯಿಂದ 100 ಮೀ. ದೂರದಲ್ಲಿ ಸಣ್ಣ ಮನೆ ನಿರ್ಮಿಸಿಕೊಳ್ಳಲು ಜಮೀನು ಖರೀದಿಸಿದವರಿಂದ ಅನುಮತಿ ಪಡೆದು ಅಲ್ಲಿ ಒಂಟಿಯಾಗಿ ವಾಸವಿದ್ದರು.
ಸಂಬಂಧಿಕ ಹರೀಶ್‌ ಶೇರ್ವೇಗಾರ ಮನೆ ಕೆಲಸಕ್ಕಾಗಿ ಆನಂದ ಅವರ ಮನೆಗೆ ದಿನನಿತ್ಯ ಬರುತಿದ್ದರು. ಆನಂದ್‌ ಸಾವನಪ್ಪಿದ ದಿನ ಹರೀಶ್‌ ಕೆಲಸ ಮುಗಿಸಿ ಹೋಗಿದ್ದರು. ತಡರಾತ್ರಿ ವಾಪಸ್‌ ಬಂದಿದ್ದರು. ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಆನಂದ್‌ ಸಾವಿಗೆ ಹರೀಶ್‌ ಕಾರಣವಾಗಿರಬಹುದು ಎಂದು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಆದರೆ ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ಗೆ ಈ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನ್ಯಾಯಾಧೀಶ ದಿನೇಶ್‌ ಹೆಗ್ಡೆ ದೋಷಮುಕ್ತಿಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿ ಪರ ಕಾರ್ಕಳದ ನ್ಯಾಯವಾದಿ ಮುಕ್ತಾ ನಿತ್ಯಾನಂದ ಶೆಣೈ ವಾದಿಸಿದ್ದರು.error: Content is protected !!
Scroll to Top