ಜೀವ ರಕ್ಷಿಸಲು ಇರುವ ವಾಹನದಲ್ಲಿ ಗೆಳೆಯರೊಂದಿಗೆ ಪ್ರವಾಸ
ಬೆಳ್ತಂಗಡಿ : ತುರ್ತು ಸೇವೆಗಳ ಉಪಯೋಗಕ್ಕೆ ಇರುವ ಆ್ಯಂಬುಲೆನ್ಸ್ ವಾಹನವನ್ನು ಪ್ರವಾಸಕ್ಕೆ ಬಳಸಿಕೊಂಡ ಪರಿಣಾಮ ಸಂಚಾರಿ ಪೊಲೀಸರಿಂದ ದಂಡ ಹಾಕಿಸಿಕೊಂಡ ಘಟನೆ ಉಜಿರೆಯಲ್ಲಿ ನಡೆದಿದೆ.
ಚಾಲಕ ತ್ಯಾಗರಾಜ್ ಆರು ಗೆಳೆಯರನ್ನು ಆ್ಯಂಬುಲೆನ್ಸ್‌ನಲ್ಲಿ ಬೆಂಗಳೂರಿನಿಂದ ಧರ್ಮಸ್ಥಳ, ಉಡುಪಿ ದೇವಸ್ಥಾನಕ್ಕೆ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ. ಅವರು ತಿರುಗಾಟ ಮುಂದುವರಿಸುತ್ತ ಕೊಟ್ಟಿಗೆಹಾರ ಆಗಿ ಉಜಿರೆಗೆ ಬರುತ್ತಿರುವ ಮಾಹಿತಿ ಬೆಳ್ತಂಗಡಿ ಸಂಚಾರಿ ಪೊಲೀಸರ ಲಭಿಸಿದ್ದು, ವಾಹನವನ್ನು ಅಡ್ಡ ಹಾಕಿ ವಶಕ್ಕೆ ಪಡೆದುಕೊಂಡಿದ್ದಾರೆ.
ಆ್ಯಂಬುಲೆನ್ಸನ್ನು ಠಾಣೆಗೆ ತಂದು ವಿಚಾರಿಸಿದಾಗ ಗೆಳೆಯರ ಜೊತೆ ದೇವಸ್ಥಾನ ಟ್ರಿಪ್ ಹೊರಟ್ಟಿದ್ದೆ ಎಂದು ಚಾಲಕ ಮಾಹಿತಿ ನೀಡಿದ್ದಾನೆ. ಚಾಲಕನಿಗೆ ದಂಡ ಹಾಕಿದ ಸಂಚಾರಿ ಪೊಲೀಸರು ಮುನ್ನೆಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.






































































