ಕಾರ್ಕಳ : ಇತ್ತೀಚೆಗೆ ನಡೆದ ಐಟಿ ದಾಳಿಯಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆ ಹಾಗೂ ಕಚೇರಿಗಳಲ್ಲಿ ದೊರೆತಿರುವ ಸುಮಾರು ರೂ. 42 ಕೋಟಿ, ಕಾಂಗ್ರೆಸ್ ಪಂಚರಾಜ್ಯಗಳ ಚುನಾವಣೆ ಎದುರಿಸಲು ಸಂಗ್ರಹಿಸಿದ ಕಮಿಷನ್ ದಂಧೆಯ ಹಣವೆಂದು ಆರೋಪಿಸಿ ಬಿಜೆಪಿ ಅಪಪ್ರಚಾರದಲ್ಲಿ ತೊಡಗಿ ಪ್ರತಿಭಟನೆ ಮಾಡುತ್ತಿರುವುದು ಬಿಜೆಪಿ ಓಲೈಸಿಕೊಂಡು ಬಂದ ಭ್ರಷ್ಟ ರಾಜಕೀಯ ಸಂಸ್ಕೃತಿಗೆ ಸಾಕ್ಷಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಲೇವಡಿ ಮಾಡಿದ್ದಾರೆ.
ತಾನು ನಡೆಸಿದ ಲೂಟಿ, ಕಮಿಷನ್ ದಂಧೆಯ ದುರಂತ ಆಡಳಿತಕ್ಕಾಗಿ ಜನರಿಂದ ಛೀಮಾರಿ ಹಾಕಿಸಿಕೊಂಡು ಕಳೆದ ಚುನಾವಣೆಯಲ್ಲಿ ದಯನೀಯ ಸೋಲನ್ನು ಕಂಡ ಬಿಜೆಪಿ ಕಾಂಗ್ರೆಸ್ ಪಕ್ಷದ ಮೇಲೆ ಕಮಿಷನ್ ದಂಧೆಯ ಆರೋಪ ಹೊರಿಸುವ ಮೊದಲು ತನ್ನ ಆಡಳಿತಾವದಿಯಲ್ಲಿ ನಡೆದ ಭ್ರಷ್ಟಾಚಾರದ ಬೆಟ್ಟವನ್ನೊಮ್ಮೆ ಅಗೆದು ನೋಡಲಿ. ಪಿಎಸ್ಐ ನೇಮಕಾತಿ ಲಂಚ ಪ್ರಕರಣ, ಟೆಂಡರ್ ಹಗರಣ, 40 ಪರ್ಸೆಂಟ್ ಕಮಿಷನ್ ದಂಧೆ, ಕೋವಿಡ್ ಕಾಲದ ಬೆಡ್ ಬುಕ್ಕಿಂಗ್, ಔಷಧಿ ಖರೀದಿ, ವೆಂಟಿಲೇಟರ್ ಹಗರಣ, ಕೋವಿಡ್ ಪರಿಹಾರ ನಿಧಿ, ವಿಶೇಷ ಅನುದಾನಗಳ ದುರ್ಬಳಕೆ ಮೊದಲಾದ ಸಾವಿರಾರು ಕೋಟಿ ಸುಲಿಗೆಯ ಬಗ್ಗೆ ಅವರದ್ದೇ ಜನರು ಬಹಿರಂಗವಾಗಿ ಪ್ರತಿರೋಧಿಸಿರುವುದನ್ನು ಈ ನಾಡಿನ ಜನ ಮರೆತಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್‌ನ್ನು ಟೀಕಿಸುವ ನೈತಿಕತೆ ಬಿಜೆಪಿಗಿಲ್ಲ
ಸಚಿವರೊಬ್ಬರ ರಾಜೀನಾಮೆಗೆ ಕಾರಣವಾದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಆಳುವ ಸರಕಾರದ 40 ಪರ್ಸೆಂಟ್ ಕಮಿಷನ್ ದಂಧೆಗೆ ಸಾಕ್ಷಿಯಾದರೆ, ಚುನಾವಣಾ ಪೂರ್ವ ಟೆಂಡರ್ ಪ್ರಕ್ರಿಯೆಯಡಿ 18,000 ಕೋಟಿ ರೂ. ಬಿಲ್ ಮಾಡಿ ಎಲೆಕ್ಷನ್ ಫಂಡ್ ರೈಸ್ ಮಾಡಿರುವ ಬಗ್ಗೆ ಅವರದ್ದೇ ಪಕ್ಷದ ಶಾಸಕರ ಬಹಿರಂಗ ಹೇಳಿಕೆ ಟೆಂಡರ್ ಹಗರಣದ ಸತ್ಯವನ್ನು ಜನರ ಮುಂದಿಟ್ಟ ನತ್ತು. ಪಿಎಸ್ಐ ಲಂಚ ಪ್ರಕರಣದಲ್ಲಿ ಪರೀಕ್ಷಾರ್ಥಿಗಳಿಂದ 40 ರಿಂದ 80 ಲಕ್ಷ ರೂ. ಲಂಚ ನೀಡಿಕೆಯ ಬಗ್ಗೆ ಆಪಾದಿತನೇ ಬಾಯಿ ಬಿಟ್ಟಿರುವ ಮೂಲಕ ಈ ಹಗರಣದ ವಿರಾಟ ಸ್ವರೂಪ ಬಟಾಬಯಲಾಗಿತ್ತು. ಇಷ್ಟೇ ಅಲ್ಲದೆ ಇನ್ನೂ ಬಹಳಷ್ಟು ಹಗರಣಗಳಲ್ಲಿ ಪಕ್ಷದ ಸಚಿವರು ಶಾಸಕರು ಭಾಗಿಯಾಗಿರುವುದು ಗುಟ್ಟಾಗಿ ಉಳಿದಿಲ್ಲ. ಈ ನೆಲೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ನಾಯಕರನ್ನಾಗಲಿ ಕಾಂಗ್ರೆಸ್ ಪಕ್ಷವನ್ನಾಗಲಿ ಟೀಕಿಸುವ ನೈತಿಕತೆಯಿಲ್ಲ ಎಂದು ಅವರು ವ್ಯಂಗವಾಡಿದ್ದಾರೆ.
ರಾಜಕೀಯ ತಾಲೀಮು
ಕಳೆದ ವಿಧಾನ ಸಭಾ ಚುನಾವಣಾ ಪೂರ್ವ ಮತ ಧ್ರುವೀಕರಣದ ಗುರಿಯೊಂದಿಗೆ ಜಾತಿ- ಮತ- ಧರ್ಮದ ರಂಗ ತಾಲೀಮು ನಡೆಸಿಯೂ ಸೋತು ಧೃತಿಗೆಟ್ಟ ಬಿಜೆಪಿ ಇದೀಗ ಮತ್ತೆ ಮುಂಬರುವ ಲೋಕಾಸಭಾ ಚುನಾವಣೆಯನ್ನು ಗುರಿಯಾಗಿಸಿ ಕಾಂಗ್ರೆಸ್ ಆಡಳಿತದ ಮೇಲೆ ಮಿಥ್ಯಾರೋಪದ ರಾಜಕೀಯ ತಾಲೀಮು ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.










































