ಸರಕಾರಿ ಸೌಲಭ್ಯಗಳಿಗಾಗಿ ನಕಲಿ ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ
ಮಂಗಳೂರು: ಸರ್ಕಾರದ ಯೋಜನೆಗಳು, ಸಾಲ ಪಡೆಯಲು ಆಧಾರ್, ಪ್ಯಾನ್, ವೋಟರ್ ಐಡಿಗಳಂತಹ ನಕಲಿ ದಾಖಲೆಗಳನ್ನು ತಯಾರಿಸಿ ನೀಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಮಂಗಳೂರಿನ ಬಜ್ಜೋಡಿ ಬಿಕರ್ನಕಟ್ಟೆ ನಿವಾಸಿ 41 ವರ್ಷದ ಬರ್ನಾಡ್ ರೋಶನ್ ಮಸ್ಕರೇನಸ್ ಎಂದು ಗುರುತಿಸಲಾಗಿದೆ. ಆರೋಪಿ ನಗರದ ಕಂಕನಾಡಿ-ಪಂಪ್‌ವೆಲ್ ಹಳೆ ರಸ್ತೆಯಲ್ಲಿರುವ ವಿಶ್ವಾಸ್ ಕ್ರೌನ್ ಅಪಾರ್ಟ್‌ಮೆಂಟ್‌ನ ನೆಲ ಮಹಡಿಯಲ್ಲಿ ಕಳೆದ 3 ವರ್ಷಗಳಿಂದ ‘ಹೆಲ್ಪ್‌ಲೈನ್ ಮಂಗಳೂರು’ ಹೆಸರಿನ ಸಂಸ್ಥೆಯನ್ನು ನಡೆಸುತ್ತಿದ್ದು, ನಕಲಿ ದಾಖಲೆ ಸೃಷ್ಟಿಸುತ್ತಿದ್ದ
ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಪಡಿತರ ಚೀಟಿ ಡೇಟಾವನ್ನು ಡೌನ್‌ಲೋಡ್ ಮಾಡಲು ಗ್ರಾಮೀಣ ಸೇವಾ ಕೇಂದ್ರದ ವೆಬ್‌ಸೈಟ್ ಬಳಸುತ್ತಿದ್ದನು. ಮೊದಲು ಆರೋಪಿ ಆಧಾರ್ ಪರಿಶೀಲನೆ ಕೆಲಸ ಮಾಡುತ್ತಿದ್ದನು. ಆದ್ದರಿಂದ ಆತನಿಗೆ ಸರ್ಕಾರಿ ಡೇಟಾಬೇಸ್‌ಗೆ ಪ್ರವೇಶ ಸುಲಭವಾಗಿತ್ತು.
ಅಂಗಡಿಯೊಂದು 500ರಿಂದ 20,000 ರೂ. ವಸೂಲಿ ಮಾಡಿ ನಕಲಿ ದಾಖಲೆಗಳನ್ನು ತಯಾರಿಸುತ್ತಿರುವ ಬಗ್ಗೆ ಸುಳಿವು ಸಿಕ್ಕಿತ್ತು. ನಕಲಿ ಆಧಾರ್, ಪಡಿತರ ಚೀಟಿ, ಮಾರ್ಕ್ಸ್ ಕಾರ್ಡ್, ನಕಲಿ ಟ್ರೇಡ್ ಲೈಸೆನ್ಸ್, ಜನನ ಪ್ರಮಾಣಪತ್ರ ಇತ್ಯಾದಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿತ್ತು. ಶುಕ್ರವಾರ ದಾಳಿ ನಡೆಸಿ ಈತ ಸೃಷ್ಟಿಸಿದ್ದ ಹಲವು ನಕಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳಿಂದ ನಕಲಿ ದಾಖಲೆಗಳನ್ನು ಪಡೆದ ಹಲವರು ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಬಳಸಿದ್ದಾರೆ. ಹೆಚ್ಚಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಪಡೆಯಲಾಗಿತ್ತು ಎಂದು ಕಮಿಷನರ್ ಸೇರಿಸಿದ್ದಾರೆ.
ಆರೋಪಿಯಿಂದ ಲ್ಯಾಪ್‌ಟಾಪ್, ಕಲರ್ ಪ್ರಿಂಟರ್, ಬಯೋಮೆಟ್ರಿಕ್ ಸಾಧನ ಇತ್ಯಾದಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































