ಸರಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ
ಬೆಂಗಳೂರು : ಕೋಲಾರ ಪ್ರತಿಭಟನೆಗೆ ಬರುವುದನ್ನು ತಡೆಯಲು ಸರಕಾರ ಯತ್ನಸಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕ ಸಿ.ಟಿ.ರವಿ, ಸರಕಾರದ ವಿರುದ್ಧ ಕಿಡಿಕಾರಿ ಕೋಲಾರ ಪಾಕಿಸ್ಥಾನದಲ್ಲಿದೆಯೇ, ನಾನು ತಾಲಿಬಾಲಿನವನಲ್ಲ, ಬಾಂಬ್ ಹಾಕಿದವನಲ್ಲ. ಕೋಲಾರದ ಜನರು ಉಂಡ ಮನೆಗೆ ಎರಡು ಬಗೆದವರ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ, ಜಿಲ್ಲಾಡಳಿತ ವೈಫಲ್ಯದಿಂದ ಸಂಸದ ಎಸ್.ಮುನಿಸ್ವಾಮಿ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ರೈತರ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ನಗರದಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಖಡ್ಗ ಅಳವಡಿಸುತ್ತೀರಾ? ಆ ಟಿಪ್ಪುವನ್ನು ಕೊಂದ ನಮ್ಮ ಉರಿಗೌಡ, ನಂಜೇಗೌಡರ ಬಳಿಯೂ ಖಡ್ಗ ಇತ್ತು. ಹಾಗೇ ಹನುಮನ ಗದೆ, ಕೃಷ್ಣನ ಸುದರ್ಶನ ಚಕ್ರ, ಶಿವನ ತ್ರಿಶೂಲ ಹೊರ ತೆಗೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದು ರೈತ, ದಲಿತ, ಹಿಂದೂ ವಿರೋಧಿ ಸರ್ಕಾರ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಕೊಡದಂತೆ ತಡೆಹಿಡಿಯಲು ಪ್ರಯತ್ನ ನಡೆದಿತ್ತು. ಕೋಲಾರ ಏನು ಪಾಕಿಸ್ಥಾನದಲ್ಲಿಯೇ? ಅಕ್ರಂ ಪಾಷ ನವಾಜ್ ಷರೀಫ್ ತಮ್ಮನೋ, ಮಗನೋ? ನಾನು ಕೋಲಾರಕ್ಕೆ ಬರಬಾರದೆಂದು ಹೇಳಲು ಇವನಾರು? ನಾನು ಬಾಂಬ್ ಹಾಕಿಲ್ಲ. ತಾಲಿಬಾನಿ ಅಲ್ಲ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾವೇರಿ ನೀರು ಬಿಟ್ಟು ಸ್ಟಾಲಿನ್ ಋಣ ತೀರಿಸಿದೆ. ಟಿಪ್ಪು ಸುಲ್ತಾನ್ ಖಡ್ಗ ಅಳವಡಿಸಲು ಬಿಟ್ಟು ಜಿಹಾದಿ, ತಾಲಿಬಾನಿಗಳ ಋಣ ತೀರಿಸುತ್ತಿದೆ ಎಂದು ಟೀಕಿಸಿದರು.
ಇದು ಭೂಗಳ್ಳರ ಸರ್ಕಾರ, ಖದೀಮ ಸರ್ಕಾರ ಎಂದು ಜನತಾ ದರ್ಶನದಲ್ಲಿ ಹೇಳಬೇಕಿತ್ತು. ಆದರೆ, ಸಚಿವರ ಅಕ್ಕ ಪಕ್ಕದಲ್ಲಿ ಭೂಗಳ್ಳರು ಕುಳಿತಿದ್ದಾರೆ ಎಂಬುದಾಗಿ ನಮ್ಮ ಸಂಸದರು ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.































