ಲಾರಿ ಮಾಲಕ – ಚಾಲಕರ ಮುಷ್ಕರಕ್ಕೆ ಬೆಂಬಲ ನೀಡಿದ ಆರ್‌ಸಿಸಿ ಗುತ್ತಿಗೆದಾರರು

ಅನಂತಶಯನದಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಜಾಥಾ

ಕಾರ್ಕಳ : ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಾಟಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಮಾಡಿರುವ ಕಾನೂನಿನ ವಿರುದ್ಧ ಲಾರಿ ಮಾಲಕರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಕಾರ್ಕಳ ಆರ್‌ಸಿಸಿ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಇತರೆ ಕಾರ್ಮಿಕ ಸಂಘ, ಇಂಜಿನಿಯರ್ಸ್‌ ಅಸೋಶಿಯನ್ಸ್‌ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಅ. 3ರಂದು ಕಾರ್ಕಳದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

ಮನವಿ ಸಲ್ಲಿಕೆ
ಅನಂತಶಯನದಿಂದ ಹೊರಟು ತಾಲೂಕು ಕಚೇರಿಯವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಬಂದ ಪ್ರತಿಭಟನಕಾರರು ಹೊಸ ವ್ಯವಸ್ಥೆಯಿಂದಾಗಿ ಕಟ್ಟಡ ನಿರ್ಮಾಣ ಸಾಮಗ್ರಿಗಳ ಪೂರೈಕೆ ನಿಂತಿರುವ ಪರಿಣಾಮವಾಗಿ ಕಟ್ಟಡ ಕಾರ್ಮಿಕರಿಗೆ ಎದುರಾಗಿರುವ ಸಮಸ್ಯೆಯನ್ನು ನಿವಾರಿಸುವಂತೆ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ನಮ್ಮನ್ನೇ ನಂಬಿರುವವರ ಗತಿಯೇನು ?
ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕ್ವಾರಿ ಮಾಲೀಕರು, ಲಾರಿ ಮಾಲೀಕರು ಮುಷ್ಕರದಲ್ಲಿ ನಿರತರಾಗಿವುದರಿಂದ ಕಟ್ಟಡ ಸಾಮಗ್ರಿಗಳು ಪೂರೈಕೆಯಾಗದೇ ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿರುತ್ತವೆ. ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಅವಲಂಬಿಸಿಕೊಂಡು ಬಂದಿರುವ ಕಾರ್ಮಿಕರು ಮತ್ತು ಅವರನ್ನೇ ನಂಬಿರುವ ಅವರ ಕುಟುಂಬ ಬೀದಿ ಪಾಲಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಕಟ್ಟಡ ನಿರ್ಮಾಣ ಗುತ್ತಿಗೆ ಕಾಮಗಾರಿಯನ್ನೇ ಅವಲಂಬಿಸಿರುವ ನಾವುಗಳು ಸಹ ತೊಂದರೆ ಅನುಭವಿಸುತ್ತಿದ್ದೇವೆ. ಕಟ್ಟಡ ಗುತ್ತಿಗೆ ನಿರ್ಮಾಣ ಸಂದರ್ಭ ಹಾಗೂ ಗುತ್ತಿಗೆ ಕೆಲಸಕ್ಕೆ ಬಳಕೆಯಾಗುತ್ತಿರುವ ಯಂತ್ರೋಪಕರಣಗಳು ಮತ್ತು ವಾಹನಗಳ ಖರೀದಿಗೆ ಮಾಡಿರುವ ಸಾಲ ತೀರಿಸಲಾಗದೇ ಸಂಕಷ್ಟಗೊಳಗಾಗಿರುತ್ತೇವೆ. ನಮ್ಮನ್ನೇ ಅವಲಂಬಿಸಿರುವ ನಮ್ಮ ಕುಟುಂಬ ಹಾಗೂ ಕಾರ್ಮಿಕರ ಕುಟುಂಬಗಳು ತುಂಬಾ ತೊಂದರೆ ಅನುಭವಿಸುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ಷ್ಮ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಕಾನೂನು ಅಳವಡಿಕೆ ತಪ್ಪಲ್ಲ – ಸಮರ್ಪಕ ವ್ಯವಸ್ಥೆ ಇರಲಿ
ಈ ಸಂದರ್ಭ ಮಾತನಾಡಿದ ಕರ್ನಾಟಕ ರಾಜ್ಯ ಫೆಡರೇಶನ್‌ ಆಫ್‌ ಕ್ವಾರಿ ಮತ್ತು ಸ್ಟೋನ್‌ ಕ್ರಷರ್‌ ಓನರ್ಸ್‌ ಅಸೋಸಿಯೇಷನ್‌ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಜಿಪಿಎಸ್‌ ಅಳವಡಿಕೆಯ ಕಾನೂನು ತಪ್ಪಲ್ಲ. ಆದರೆ, ಅದನ್ನು ಜಾರಿಗೊಳಿಸಲು ಬೇಕಾದ ವ್ಯವಸ್ಥೆ ಸಮರ್ಪಕವಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸುವುದು ಅಗತ್ಯ. ಉಡುಪಿ ಜಿಲ್ಲೆಯಲ್ಲಿ ಜಾರಿಗೆ ಬಂದ ಈ ಕಾನೂನಿಂದ ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಬೇಕು. ಹೋರಾಟ ಕೇವಲ ಪ್ರತಿಭಟನೆಗೆ ಸೀಮಿತವಾಗದೆ ಪ್ರತಿನಿಧಿಗಳ ಮೂಲಕ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರುವಂತಾಗಲಿ ಎಂದರು.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ರವಿಶಂಕರ್ ಶೇರಿಗಾರ್, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ದಾಮೋದರ ಆಚಾರ್ಯ. ಪ್ರಮುಖರಾದ ಉದಯ್ ಕುಮಾರ್ ಹೆಗ್ಡೆ, ದೇವಿದಾಸ್ ಪ್ರಭು, ಸತೀಶ್ ಪ್ರಭು ನವೀನ್ ದೇವಾಡಿಗ, ವೃಷಭರಾಜ್ ಕಡಂಬ, ಸಂತೋಷ ಮಹಾಲಿಂಗೇಶ್ವರ ಮತ್ತು ಕಟ್ಟಡ ಕಾರ್ಮಿಕರ ಪದಾಧಿಕಾರಿಗಳು, ಕಾರ್ಮಿಕರು ಹಾಗೂ ಜನ ಸಾಮಾನ್ಯರು ಭಾಗವಹಿಸಿದ್ದರು.













































































error: Content is protected !!
Scroll to Top