ಕುಂದಾಪುರದ ಹೊಟೇಲ್‌ ಉದ್ಯಮಿಯ ಇರಿದು ಹತ್ಯೆ

ಉಡುಪಿ : ಕುಂದಾಪುರದಲ್ಲಿ ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರಿನ ಕುಂದಾಪುರ ಮೂಲದ ಉದ್ಯಮಿ ರಾಘವೇಂದ್ರ ಶೇರುಗಾರ್ (42) ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಹೊಟೇಲ್‌ ಉದ್ಯಮ ನಡೆಸುತ್ತಿದ್ದ ರಾಘವೇಂದ್ರ ಅವರು, ಕೆಲವು ವರ್ಷಗಳಿಂದ ಊರಾದ ಕುಂದಾಪುರಕ್ಕೆ ಬಂದು ಇಲ್ಲಿಯೇ ನೆಲೆಸಿದ್ದರು. ಬನ್ಸ್‌ ರಾಘು ಎಂದೇ ಗುರುತಿಸಿಕೊಂಡಿದ್ದ ರಾಘವೇಂದ್ರ ಅವರು ಸಂಚಲನ ಎನ್ನುವ ಸಿನೆಮಾದಲ್ಲಿಯೂ ನಟಿಸಿದ್ದರು.
ಭಾನುವಾರ ಸಂಜೆ ಸುಮಾರು 7.10ರ ವೇಳೆಗೆ ಕುಂದಾಪುರದ ಚಿಕ್ಕನ್‌ಸಾಲ್‌ ರಸ್ತೆಯ ಅಂಚೆ ಕಚೇರಿ ಸಮೀಪದ ಡೆಲ್ಲಿ ಬಜಾರ್‌ ಬಳಿ ರಾಘವೇಂದ್ರ ಹಾಗೂ ವ್ಯಾಗನರ್‌ ಕಾರಿನಲ್ಲಿ ಬಂದಿದ್ದ ಇನ್ನಿಬ್ಬರು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದರು. ಆ ಪೈಕಿ ಓರ್ವ ರಾಘವೇಂದ್ರ ಅವರ ತೊಡೆಗೆ ಚೂರಿಯಿಂದ ಇರಿದು ಬಳಿಕ ಇಬ್ಬರೂ ಕಾರಿನಲ್ಲಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಹಣಕಾಸಿನ ಇಲ್ಲವೇ ವೈಯಕ್ತಿಕ ವಿಚಾರವಾಗಿ ಕೊಲೆ ಮಾಡಿರುವ ಶಂಕೆಯಿದೆ. ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾ ಡಾ.ಅರುಣ್‌ ಕೆ. ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಡಿವೈಎಸ್ಪಿ ಬೆಳ್ಳಿಯಪ್ಪ, ವೃತ್ತ ನಿರೀಕ್ಷಕ ನಂದ ಕುಮಾರ್‌, ಭೇಟಿ ನೀಡಿದ್ದಾರೆ. ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.













































































error: Content is protected !!
Scroll to Top