ಕರಾವಳಿಗೆ ತಟ್ಟದ ಬಂದ್‌ ಬಿಸಿ

ಸಹಜ ಸ್ಥಿತಿಯಲ್ಲಿ ಬಸ್‌ ಸಂಚಾರ, ವ್ಯಾಪಾರ ವಹಿವಾಟು

ಕಾರ್ಕಳ : ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ಪ್ರತಿಭಟಿಸಿ ಕನ್ನಡ ಸಂಘಟನೆಗಳು ಮತ್ತು ರೈತ ಸಂಘಟನೆಗಳು ನಡೆಸುತ್ತಿರುವ ಕರ್ನಾಟಕ ಬಂದ್‌ ಬಿಸಿ ಕರಾವಳಿ ಭಾಗಕ್ಕೆ ಒಂದಿನಿತೂ ತಟ್ಟಿಲ್ಲ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಎಲ್ಲವೂ ಸಹಜ ಸ್ಥಿತಿಯಲ್ಲಿ ಇದೆ. ವಾಹನ ಸಂಚಾರ ಎಂದಿನಂತಿದ್ದು, ವ್ಯಾಪಾರ ವಹಿವಾಟು ಮಾಮೂಲಿಯಾಗಿ ನಡೆಯುತ್ತಿದೆ.
ಖಾಸಗಿ ಬಸ್‌ ಮಾಲಕರು ನಿನ್ನೆಯೇ ಬಂದ್‌ಗೆ ನೈತಿಕ ಬೆಂಬಲ ಮಾತ್ರ, ಬಸ್‌ ಸಂಚಾರ ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದ್ದರು. ಇಂದು ಬಸ್‌ಗಳೆಲ್ಲ ನಿಗದಿತ ಸಮಯದಲ್ಲಿ ಓಡಾಡುತ್ತಿವೆ. ಹೊರ ಜಿಲ್ಲೆಗಳಿಂದ ಕೆಲವು ಬಸ್‌ಗಳು ಬಂದಿಲ್ಲ ಎನ್ನುವುದನ್ನು ಬಿಟ್ಟರೆ ಉಳಿದಂತೆ ಪ್ರಯಾಣಿಕರಿಗೆ ಹೆಚ್ಚಿನ ಸಮಸ್ಯೆಯಾಗಿಲ್ಲ. ಕರಾವಳಿ- ಬೆಂಗಳೂರು ನಡುವೆ ಬಹುತೇಕ ಖಾಸಗಿ ಬಸ್‌ಗಳು ರಾತ್ರಿ ಓಡಾಟ ನಡೆಸುವುದರಿಂದ ಅವುಗಳಿಗೂ ಬಂದ್‌ನಿಂದ ಹೆಚ್ಚಿನ ಸಮಸ್ಯೆಯಾಗಿಲ್ಲ. ವರ್ತಕರ ಸಂಘಟನೆಗಳು ಬಂದ್‌ ಕುರಿತಂತೆ ಯಾವುದೇ ನಿಲುವು ವ್ಯಕ್ತಪಡಿಸದಿದ್ದರೂ ವ್ಯಾಪಾರ ವಹಿವಾಟನ್ನು ಬಂದ್‌ ಬಾಧಿಸಿಲ್ಲ. ಹೊಟೇಲ್‌, ಅಂಗಡಿಗಳೆಲ್ಲ ತೆರೆದಿವೆ. ಶಾಲಾ ಕಾಲೇಜ್‌ಗಳೂ ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.

















































































error: Content is protected !!
Scroll to Top