ಯುವರಾಜ್ ಸಿಂಗ್, ರೋಹಿತ್ ಶರ್ಮ ದಾಖಲೆಗಳನ್ನು ಮುರಿದ ನೇಪಾಳದ ಆಟಗಾರರು
ಹ್ಯಾಂಗ್‌ಝೂ: ನೇಪಾಳದ ಕ್ರಿಕೆಟ್ ತಂಡ 20-ಟ್ವೆಂಟಿ ಪಂದ್ಯದಲ್ಲಿ ಕ್ರಿಕೆಟ್ ಜಗತ್ತು ಆಶ್ಚರ್ಯಚಕಿತವಾಗುವಂಥ ಸಾಧನೆ ಮಾಡಿದೆ. ಏಷ್ಯನ್ ಗೇಮ್ಸ್‌ನಲ್ಲಿ ನೇಪಾಳ ತಂಡ ಕ್ರಿಕೆಟ್ ವಿಕ್ರಮವನ್ನೇ ಮೆರೆದಿದ್ದು, ಹಲವು ದಾಖಲೆಗಳನ್ನು ಮುರಿದು ಬೀಗಿದೆ. ಆದರೆ ಈ ಎಲ್ಲ ದಾಖಲೆಗಳು ಅಗಿರುವುದು ಮಾತ್ರ ಕ್ರಿಕೆಟ್ ಅಂಗಳದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ಮಂಗೋಲಿಯ ತಂಡದ ಎದುರು ಅಷ್ಟೇ.
ನೇಪಾಳದ ಆಟಗಾರರು ಒಂದೇ ಪಂದ್ಯದಲ್ಲಿ 3 ವಿಶ್ವ ದಾಖಲೆಯನ್ನು ಮಾಡಿದ್ದಾರೆ.
ನೇಪಾಳ ಹಾಗೂ ಮಂಗೋಲಿಯ ನಡೆದ ಪಂದ್ಯ ಹಲವು ಕ್ರಿಕೆಟ್ ದಾಖಲೆಗಳನ್ನು ಉಡೀಸ್ ಆಗಿದೆ. ಟಿ-20 ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿ ಹಿಂದಿನ ಎಲ್ಲ ದಾಖಲೆಗಳನ್ನು ಬ್ರೇಕ್ ಮಾಡಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಮಂಗೋಲಿಯದವರು ನೇಪಾಳದ ಬ್ಯಾಟರ್ ಗಳ ಅಬ್ಬರಕ್ಕೆ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. 19 ವರ್ಷದ ಎಡಗೈ ಬ್ಯಾಟ್ಸ್‌ಮ್ಯಾನ್ ಕುಶಾಲ್ ಮಲ್ಲ ಕೇವಲ 34 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಡೇವಿಡ್ ಮಿಲ್ಲರ್, ರೋಹಿತ್ ಶರ್ಮಾ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದ ಮಲ್ಲ 12 ಸಿಕ್ಸರ್ , 8 ಬೌಂಡರಿಗಳನ್ನು ಸಿಡಿಸಿದ್ದು, 137 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.
5ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ದೀಪೇಂದ್ರ ಸಿಂಗ್ ಐರೆ, ಯುವರಾಜ್ ಸಿಂಗ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಕೇವಲ 9 ಎಸೆತಗಳಲ್ಲಿ ಅರ್ಧ ಶತಕವನ್ನು ಸಿಡಿಸಿದ್ದಾರೆ. ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ 2007ರ ವಿಶ್ವಕಪ್‌ನಲ್ಲಿ 12 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ್ದರು.
ಈ ದಾಖಲೆ ಮಾತ್ರವಲ್ಲದೆ ಟಿ-20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೂಡ ನೇಪಾಳ ಮಾಡಿದೆ. 3 ವಿಕೆಟ್ ಕಳೆದುಕೊಂಡು 314 ರನ್ ಗಳಿಸುವ ಮೂಲಕ ವಿಶ್ವ ದಾಖಲೆಯನ್ನು ಬರೆದಿದೆ. ಈ ಹಿಂದೆ ಅಫ್ಘಾನಿಸ್ಥಾನ, ಐರ್ಲೆಂಡ್ ವಿರುದ್ಧ 3 ವಿಕೆಟ್‌ಗೆ 278 ರನ್ ಗಳಿಸಿತ್ತು.


































