ಕಾರ್ಕಳದ ಪಟ್ಟಣಗಳಲ್ಲಿ ನಿರ್ಮಾಣವಾಗಲಿ ಸಾರ್ವಜನಿಕ ಶೌಚಾಲಯ

ಕಾರ್ಕಳ : ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾರ್ಕಳ ಪೇಟೆ ಮತ್ತು ತಾಲೂಕಿನ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳು ಇಲ್ಲದೆ ಜನರಿಗೆ ಬಹಳ ಸಮಸ್ಯೆಯಾಗುತ್ತಿದೆ. ದೇಶದ ಪ್ರಧಾನಿಯೇ ಸ್ವಚ್ಛ ಭಾರತ ಮಾಡುವ ಪಣತೊಟ್ಟು ಅಗತ್ಯವಿರುವಲೆಲ್ಲ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕೆಂದು ಹೇಳಿದ್ದಾರೆ. ಆದರೆ ಉಳಿದೆಲ್ಲ ವಿಚಾರಗಳಲ್ಲಿ ಸಾಕಷ್ಟು ಅಭಿವೃದ್ದಿಯನ್ನು ಕಂಡಿರುವ ಕಾರ್ಕಳದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ವಿಚಾರದಲ್ಲಿ ಬಹಳ ಹಿಂದುಳಿದಿದೆ. ಕಾರ್ಕಳ ನಗರ ಹಾಗೂ ಸುತ್ತಮುತ್ತಲಿನ ಕೆಲವೊಂದು ಜನಜಂಗುಳಿ ಇರುವ ವೃತ್ತ, ಪೇಟೆ, ಪಟ್ಟಣಗಳಲ್ಲಿ ಸಾರ್ವಜನಿಕರಿಗೆ ಶೌಚಾಲಯಗಳ ಅವಶ್ಯಕತೆ ಬಹಳ ಇದೆ.

ಪುಲ್ಕೇರಿ ಜಂಕ್ಷನ್
ಇಲ್ಲಿ ದಿನನಿತ್ಯ ಸಾವಿರಾರು ಪ್ರಯಾಣಿಕರು, ಶಾಲಾ ಮಕ್ಕಳು, ಮಹಿಳೆಯರು, ದೂರದ ಊರುಗಳಿಂದ ಬಂದು ಇಳಿಯುತ್ತಾರೆ, ಈ ಜಂಕ್ಷನ್‌ನಲ್ಲಿ ಈಗ ಹತ್ತಾರು ಕಟ್ಟಡಗಳು ಎದ್ದು ನಿಂತಿವೆ, ಆದರೆ ಒಂದೇ ಒಂದು ಸಾರ್ವಜನಿಕ ಶೌಚಾಲಯವಿಲ್ಲ.

ಸರ್ವಜ್ಞ ವೃತ್ತ
ತಾಲೂಕು ಕಚೇರಿ, ಇತರ ಸರಕಾರಿ ಕಚೇರಿಗಳು, ಪೊಲೀಸ್ ಠಾಣೆ, ಮೆಸ್ಕಾಂ, ಶಿಕ್ಷಣಾಧಿಕಾರಿಗಳ ಕಚೇರಿ, ಕುಕ್ಕುಂದೂರು ಪಂಚಾಯತ್, ತಾಲೂಕು ಪಂಚಾಯತ್, ಶಾಸಕರ ಕಚೇರಿ, ರೋಟರಿ ಆಸ್ಪತ್ರೆ, ಬ್ಯಾಂಕು, ಹತ್ತಾರು ಹೋಟೆಲ್, ಅಂಗಡಿಗಳು, ಸಭೆ ಸಮಾರಂಭಗಳು ನಡೆಯುವ ಮೈದಾನ ಇರುವ, ಸಾವಿರಾರು ವಾಹನಗಳು ಓಡಾಡುವ ಸ್ಥಳ ಇದು. ದಿನವಿಡೀ ಜನಜಂಗುಳಿ ಇರುವ ಈ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯದ ಅಗತ್ಯದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ ಎನುವುದು ವಿಷಾದದ ಸಂಗತಿ.

ಜೋಡುರಸ್ತೆ
ಇದು ಕಾರ್ಕಳದಲ್ಲಿ ಹೊಸದಾಗಿ ಅಭಿವೃದ್ಧಿಹೊಂದಿದ ಪ್ರಮುಖ ಪ್ರದೇಶ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದ್ವಿಪಥ ರಸ್ತೆ, ಫುಟ್‌ಪಾತ್‌, ದಾರಿ ದೀಪ, ಒಳಚರಂಡಿ ವ್ಯವಸ್ಥೆ ಇತ್ಯಾದಿಗಳನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಅಭಿವೃದ್ಧಿಯಿಂದ ಜೋಡುರಸ್ತೆ ಪೇಟೆಯ ಚಿತ್ರಣ ಬದಲಿಸದ್ದು ಒಳ್ಳೆಯ ಕೆಲಸ. ಕೆಲವೊಂದು ಬಹುಮಹಡಿ ಕಟ್ಟಡಗಳು ಎದ್ದು ನಿಂತಿವೆ, ಇನ್ನು ಕೆಲವು ನಿರ್ಮಾಣ ಹಂತದಲ್ಲಿವೆ. ದೊಡ್ಡ ದೊಡ್ಡ ಶೋರೂಮ್‌ಗಳು ಬರುತ್ತಿವೆ. ಸಾವಿರಾರು ವಾಹನಗಳು ಓಡಾಡುತ್ತವೆ, ದಿನನಿತ್ಯ ಸಾವಿರಾರು ಜನರು ಬೇರೆ ಬೇರೆ ಕಡೆಗಳಿಂದ, ಉದ್ಯೋಗ, ವ್ಯವಹಾರ, ವಹಿವಾಟು, ಖರೀದಿ, ದೇವಸ್ಥಾನ, ಬ್ಯಾಂಕ್, ಮೆಡಿಕಲ್‌ಗಳಿಗೆ, ಶಾಲೆ, ಕಾಲೇಜು ಎಂದು ಇಲ್ಲಿಗೆ ಬರುತ್ತಾರೆ, ಆದರೆ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲದೆ ಜನ ಪರದಾಡುವಂತಾಗಿದೆ.

ಬೈಲೂರು
ಬೈಲೂರು, ಕಾರ್ಕಳ-ಉಡುಪಿ ಹೆದ್ದಾರಿಯಲ್ಲಿ ಬರುವ ಒಂದು ಅಭಿವೃದ್ಧಿ ಕಾಣುತ್ತಿರುವ ಪೇಟೆ. ಇದು ನೀರೆ, ಕೌಡೂರು ಮತ್ತು ಬೈಲೂರು ಗ್ರಾಮ ಪಂಚಾಯತ್‌ಗಳಿಂದ ಕೂಡಿರುತ್ತದೆ. ಪಳ್ಳಿ ಕ್ರಾಸ್‌ನಿಂದ ಬೈಲೂರು ಜೂನಿಯರ್ ಕಾಲೇಜು ತನಕ, ದಿನಂಪ್ರತಿ ಸಾವಿರಾರು ಜನರು ಓಡಾಡುವ ಜನಸಂದಣಿ ಇರುವ ಪೇಟೆ. ಬಹುಮಹಡಿ ಕಟ್ಟಡಗಳು, ಅಂಗಡಿ ವಸಾಹತುಗಳು ತಲೆ ಎತ್ತುತ್ತಿವೆ. ಬೈಲೂರು ಪೇಟೆಗೆ ದಿನಂಪ್ರತಿ ಸಾವಿರಾರು ಜನರು, ಬ್ಯಾಂಕ್, ಪೋಸ್ಟ್, ಆಸ್ಪತ್ರೆ, ಶಾಲೆ, ಸೊಸೈಟಿ, ಪಂಚಾಯತ್, ದೇವಸ್ಥಾನ, ಹೀಗೆ ಬೇರೆ ಬೇರೆ ರೀತಿಯ ವ್ಯಾಪಾರ, ವ್ಯವಹಾರಗಳಿಗಾಗಿ ಬಂದು ಹೋಗುತ್ತಾರೆ. ಬೈಲೂರು ಜೂನಿಯರ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಇತರರು ಬೇರೆ ಬೇರೆ ಕಡೆಯಿಂದ ಬಂದು ಹೋಗುತ್ತಾರೆ. ಆದರೆ ಇಡೀ ಬೈಲೂರು ಪೇಟೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೆ ಜನರು ಪರದಾಡುವ ಸ್ಥಿತಿ ಎದ್ದು ಕಾಣುತ್ತಿದೆ.
ಬೈಲೂರು, ಈಗ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣವಾದ ಬಳಿಕ ವಿಶ್ವ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ದೇಶ ವಿದೇಶಗಳಿಂದ ಬರುವ ಪ್ರವಾಸಿಗರ ಸಂಖ್ಯೆ ದಿನಂಪ್ರತಿ ಹೆಚ್ಚಾಗುತ್ತಿದೆ. ಇಂತಹ ಊರಲ್ಲಿ ಸಾರ್ವಜನಿಕರಿಗೆ ಒಂದು ಶೌಚಾಲಯ ಇಲ್ಲದಿರುವುದು ಬೈಲೂರಿಗೊಂದು ಕಪ್ಪುಚುಕ್ಕೆ ಎನ್ನಬಹುದು.

ಕಾರ್ಕಳದ ಕೆಲವೊಂದು ಕಡೆ ಸಾರ್ವಜನಿಕ ಶೌಚಾಲಯಗಳು ಇದ್ದರೂ ಸರಿಯಾದ ನಿರ್ವಹಣೆ ಇಲ್ಲದೆ ದುರ್ನಾತ ಬೀರುತ್ತಿವೆ. ಜನರು ಇವುಗಳ ಸಮೀಪ ಹೋಗಲು ಹೇಸಿಗೆ ಪಡುತ್ತಾರೆ. ಮುಖ್ಯ ರಸ್ತೆ , ಹೆದ್ದಾರಿಗಳಲ್ಲಿ ಶೌಚಾಲಯದ ಅಗತ್ಯ ಬಹಳ ಇದೆ. ಜನನಿಬಿಡ ಪೇಟೆ, ಪಟ್ಟಣಗಳಲ್ಲಿ ದೇಹಬಾಧೆ ತೀರಿಸಿಕೊಳ್ಳಲು ಜಾಗ ಇಲ್ಲ. ದೂರದ ಊರುಗಳಿಂದ ಬರುವ ಜನರಿಗೆ, ಪ್ರಯಾಣಿಕರಿಗೆ, ಆರೋಗ್ಯ ಸಮಸ್ಯೆ ಇರುವವರಿಗೆ, ಮಹಿಳೆಯರು, ಹಿರಿಯ ನಾಗರಿಕರಿಗೆ ಶೌಚಾಲಯಇಲ್ಲದಿದ್ದರೆ ಬಹಳ ಸಮಸ್ಯೆಯಾಗುತ್ತದೆ. ಪೇಟೆಯಲ್ಲೇ ದಿನವಿಡೀ ಇರುವ ರಿಕ್ಷಾ, ಕಾರು ಚಾಲಕರು, ಅಂಗಡಿಯವರು, ಕಾರ್ಮಿಕರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ಶೌಚಾಲಯದ ಅವಶ್ಯಕತೆ ಬಹಳ ಇರುತ್ತದೆ. ಹೆಚ್ಚಿನ ಕಡೆ ಅಲ್ಲಲ್ಲಿ ಮೂತ್ರ ವಿಸರ್ಜನೆ ಮಾಡಿ. ಊರೆಲ್ಲ ವಾಸನೆ ಬರುತ್ತಿದೆ, ಇದರಿಂದ ಊರಿನ ಸ್ವಾಸ್ಥ್ಯ ಕೆಡುತ್ತದೆ. ಇದರ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕಾಗಿದೆ.

✒️ ಸುಕೇಶ್‌ ರಾವ್‌, ಬೈಲೂರುerror: Content is protected !!
Scroll to Top