ಕಾರಿಗೆ ಬೈಕ್ ಡಿಕ್ಕಿ : ಸವಾರನಿಗೆ ಗಾಯ
ಅಜೆಕಾರು : ಮರ್ಣೆ ಗ್ರಾಮದ ಜುಮ್ಮಾ ಮಸೀದಿಯ ಬಳಿ ಭಾನುವಾರ ಕಾರು ಮತ್ತು ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ರಚನ್ ಎಂಬವರು ಗಾಯಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕಿರಣ್ ಕುಮಾರ್ ಪಿ. (29) ಕಾರಿನಲ್ಲಿ ಶಿವಮೊಗ್ಗಕ್ಕೆ ಹೋಗುತ್ತಿರುವಾಗ ಎದುರಿನಿಂದ ವೇಗವಾಗಿ ಬಂದ ಬೈಕ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಿರುಸಿಗೆ ಎರಡೂ ವಾಹನಗಳು ಜಖಂಗೊಂಡಿವೆ. ಬೈಕ್ ಸವಾರ ರಚನ್ ಗಾಯಗೊಂಡಿದ್ದಾರೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನಸಿಕ ಅಸ್ವಸ್ಥ ವ್ಯಕ್ತಿ ಆತ್ಮಹತ್ಯೆ
ಕಾರ್ಕಳ : ಮಾನಸಿಕ ಅಸ್ವಸ್ಥ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಕುಕ್ಕುಂದೂರು ಗ್ರಾಮದ ಮಾದ್ಯಾಕಾರ್‌ನಲ್ಲಿ ಸಂಭವಿಸಿದೆ.
ಸತೀಶ ಆಚಾರ್ಯ(49) ಆತ್ಮಹತ್ಯೆ ಮಾಡಿಕೊಂಡವರು. ಮಾನಸಿಕ ಸಮಸ್ಯೆ ಇದ್ದ ಸತೀಶ್ ಆಚಾರ್ಯ ಅವಿವಾಹಿತರಾಗಿದ್ದು, ಸಹೋದರ ಶ್ರೀನಿವಾಸ ಆಚಾರ್ಯರ ಮನೆಯಲ್ಲಿ ವಾಸವಾಗಿದ್ದರು. ಒಂದು ವರ್ಷದಿಂದ ಅವರಿಗೆ ಚಿಕಿತ್ಸೆ ನಡೆಯುತ್ತಿತ್ತು. ಭಾನುವಾರ ಸಹೋದರ ಶ್ರೀನಿವಾಸ ಆಚಾರ್ಯ ಕುಟುಂಬ ಸಮೇತ ಕಾಂತಾವರಕ್ಕೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ವಾಪಸು ಬಂದು ನೋಡಿದಾಗ ಮನೆಯಲ್ಲಿ ಸತೀಶ್ ಆಚಾರ್ಯ ಇರಲಿಲ್ಲ. ಹೊರಗೆಲ್ಲೋ ಹೋಗಿರಬಹುದೆಂದು ಮನೆಯವರು ಭಾವಿಸಿದ್ದರು. ರಾತ್ರಿ ತನಕ ವಾಪಸಾಗದ ಕಾರಣ ಅನುಮಾನಗೊಂಡು ಹುಡುಕಾಡಿದಾಗ ಪಕ್ಕದಲ್ಲೇ ಇರುವ ಹಳೆ ಮನೆಯಲ್ಲಿ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲದ ಹೊರೆಯಿಂದ ಆತ್ಮಹತ್ಯೆ
ಹೆಬ್ರಿ : ವಿಪರೀತ ಸಾಲದ ಹೊರೆಯಿಂದ ಬೇಸತ್ತು ಕೂಲಿ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಡ್ಪಾಲು ಗ್ರಾಮದ ಹಕ್ಕರ್ಕೆ ಸೋಮೇಶ್ವರ ಎಂಬಲ್ಲಿ ಸೋಮವಾರ ಸಂಭವಿಸಿದೆ. ವಿಜೇಂದ್ರ ನಾಯ್ಕ (38) ಆತ್ಮಹತ್ಯೆ ಮಾಡಿಕೊಂಡವರು.
ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಬ್ಯಾಂಕ್ ಮತ್ತಿತರೆಡೆ ಸಾಲ ಮಾಡಿಕೊಂಡಿದ್ದರು. ಇದನ್ನು ತೀರಿಸಲಾಗದೆ ಮಾನಸಿಕ ಖಿನ್ನತೆಗೆ ಒಳಗಾಗಿ ಸೋಮವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.