ನಿತ್ಯ ಕುಡಿದು ಬಂದು ತಾಯಿಗೆ ಹಿಂಸೆ ನೀಡುತ್ತಿದ್ದ ಪುತ್ರರು
ಮಂಗಳೂರು : ತಾಯಿಗೆ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಮೂವರು ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ. ಮುಲ್ಕಿ ಸಮೀಪದ ಕೆ.ಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಪ್ರದೇಶದ ಕೊರಂಟಬೆಟ್ಟು ಕಾಲೋನಿಯಲ್ಲಿ ಮಹಿಳೆಯೊಬ್ಬರು ತನ್ನ ಮೂವರು ಗಂಡು ಮಕ್ಕಳು ವಿಪರೀತ ಮದ್ಯ ಸೇವಿಸಿ ಮನೆಗೆ ಬಂದು ಜಗಳ ಮಾಡುತ್ತಿದ್ದ ಕಾರಣದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿ ಮೂವರು ಪುತ್ರರನ್ನು ಬಂಧಿಸಲಾಗಿದೆ.
ಮೃತ ಮಹಿಳೆಯನ್ನು ಸುಮಿತ್ರ (44) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಮಂಜುನಾಥ (25), ಪ್ರಹ್ಲಾದ ಯಾನೆ ಪ್ರಭು (19), ಸಂಜೀವ(22) ಗುರುವಾರ ರಾತ್ರಿ ಮದ್ಯದ ನಶೆಯಲ್ಲಿ ಮನೆಯಲ್ಲಿ ಜಗಳ ಮಾಡಿಕೊಂಡಿದ್ದು, ಈ ಸಂದರ್ಭ ತಾಯಿ ಸುಮಿತ್ರ ಮನನೊಂದು ಕೋಣೆಯ ಪಕ್ಕಾಸಿನಲ್ಲಿ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪಣಂಬೂರು ಎಸಿಪಿ, ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿದ್ದಾರೆ.