ವಿದ್ಯಾರ್ಥಿಗಳು ಸಾವರ್ಕರ್‌ ಕೀ ಜೈ ಎಂದಿದ್ದಕ್ಕೆ ಶಿಕ್ಷಕಿಯಿಂದ ಕ್ಷಮೆ ಕೇಳಿಸಿದ ಪೋಷಕರು

ಸ್ವಾತಂತ್ರ್ಯ ದಿನದಂದು ಸರಕಾರಿ ಶಾಲೆಯಲ್ಲಿ ನಡೆದ ಘಟನೆ

ಬಂಟ್ವಾಳ: ಸ್ವಾತಂತ್ರ್ಯ ದಿನಾಚರಣೆಯಂದು ವಿದ್ಯಾರ್ಥಿಗಳು ‘ಸಾವರ್ಕರ್ ಕೀ ಜೈ’ ಎಂದು ಘೋಷಣೆ ಕೂಗಿರುವುದಕ್ಕೆ ಕೆಲವು ಪೋಷಕರು ಆಕ್ಷೇಪ ವ್ಯಕ್ತಪಡಿಸಿ ಶಿಕ್ಷಕಿಯಿಂದ ಕ್ಷಮೆ ಕೇಳಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಈ ಕುರಿತು ಕರೆದ ಸಭೆಯಲ್ಲಿ ಕೆಲವು ಪೋಷಕರು ವಿದ್ಯಾರ್ಥಿಗಳಿಂದ ಸಾವರ್ಕರ್‌ ಕೀ ಜೈ ಎಂದು ಕೂಗಿಸಿದ್ದಕ್ಕೆ ಶಿಕ್ಷಕಿಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ. ಕೊನೆಗೆ ಶಿಕ್ಷಕಿ ಅವರ ಒತ್ತಾಯಕ್ಕೆ ಮಣಿದು ಕ್ಷಮೆ ಕೇಳಿದ್ದಾರೆ.
ವಿದ್ಯಾರ್ಥಿಗಳು ಸಾವರ್ಕರ್‌ ಕೀ ಜೈ ಎಂದು ಘೋಷಣೆ ಕೂಗುವ ವೀಡಿಯೋ ವೈರಲ್‌ ಆದ ಬಳಿಕ ಪೋಷಕರು ಆಕ್ಷೇಪ ಎತ್ತಿದ್ದಾರೆ. ಸಭೆಯಲ್ಲಿ ಒಂದು ವರ್ಗದ ಮಹಿಳೆಯರು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಭೆಯ ವೀಡಿಯೋ ಕೂಡ ವೈರಲ್‌ ಆಗಿದೆ.
ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಮಂಚಿ ಸರಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳು ಸರೋಜಿನಿ ನಾಯ್ಡು, ಬಿಪಿನ್ ಚಂದ್ರಪಾಲ್‌ ಮತ್ತಿತರರ ಜತೆ ವೀರ್ ಸಾವರ್ಕರ್ ಅವರಿಗೂ ಜೈ ಎಂದಿದ್ದಾರೆ. ಆದರೆ ಶಿಕ್ಷಕಿ ಒತ್ತಾಯದಿಂದ ಸಾವಕರ್‌ ಕೀ ಜೈ ಎಂದು ಹೇಳಿಸಿದ್ದಾರೆ ಎಂದು ಕೆಲವು ಪೋಷಕರು ಆರೋಪಿಸಿದ್ದಾರೆ.
ಘಟನೆಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿ ಶಾಲೆಯ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಶಾಲೆಯ ಮುಖ್ಯೋಪಾಧ್ಯಾಯಿನಿ ಸಭೆ ನಡೆಸಿ ಪೋಷಕರ ಕ್ಷಮೆ ಯಾಚಿಸಿದರು. ಆದರೆ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದವರ ವಿರುದ್ಧ ಮುಖ್ಯಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬಿಜೆಪಿ ಮುಖಂಡರು ಈ ಘಟನೆಯನ್ನು ಖಂಡಿಸಿದ್ದು, ಎಲ್ಲ ಸ್ವಾತಂತ್ರ್ಯ ಯೋಧರಿಗಿಂತ ಮೇಲಿನ ಮಟ್ಟದಲ್ಲಿ ಸಾವರ್ಕರ್‌ ಇದ್ದಾರೆ. ಅವರಿಗೆ ಜೈ ಎಂದಿರುವುದಕ್ಕೆ ಆಕ್ಷೇಪ ಎತ್ತಿರುವುದು ಸರಿಯಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್‌ ಹೇಳಿದ್ದಾರೆ.

































































error: Content is protected !!
Scroll to Top