ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ವಾಗ್ದಾನ ನೀಡಿದ ಉಸ್ತುವಾರಿ ಸಚಿವೆ
ಉಡುಪಿ: ಅಜ್ಜರಕಾಡು ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಧ್ವಜಾರೋಹಣ ನಡೆಸಿ ಗೌರವ ವಂದನೆ ಸ್ವಿಕರಿಸಿದರು.
ನಾವೆಲ್ಲಾ ಇಂದು ದೇಶದ ಉಜ್ವಲ ಭವಿಷ್ಯಕ್ಕಾಗಿ ಕನಸು ಕಟ್ಟಿಕೊಳ್ಳಲು ಇಲ್ಲಿ ಸೇರಿದ್ದೇವೆ. ನಮ್ಮ ಕನಸುಗಳ ಜತೆಗೆ ನಮ್ಮ ಮಹಾತ್ಮರ ಕನಸುಗಳು, ಆಶಯಗಳನ್ನ ನನಸಾಗಿಸಲು ನಾವೆಲ್ಲ ಇಂದು ಸಂಕಲ್ಪ ಮಾಡೋಣ. ಉಡುಪಿ ಜಿಲ್ಲೆ ಸ್ಥಾಪನೆಯಾಗಿ 25 ವರ್ಷ ಕಳೆದಿದೆ. ಈ ನಮ್ಮ ಜಿಲ್ಲೆಯ ರಮಣೀಯ ಪ್ರಕೃತಿ ಸೌಂದರ್ಯ, ನದಿಗಳು, ಕಡಲ ತೀರಗಳು, ಶಿಕ್ಷಣ ಸಂಸ್ಥೆ, ರಾಜ್ಯ, ದೇಶ ಹಾಗೂ ವಿದೇಶಗಳಿಂದಲೂ ಸಹ ಗುರುತಿಸಿಕೊಂಡಿದೆ. ಜಿಲ್ಲೆ ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ಅಭಿವೃದ್ಧಿ ಕಂಡಿದೆ. ಮತ್ತಷ್ಟು ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕೋಮು ಸಂಘರ್ಷಕ್ಕೆ ಕಾರಣವಾಗುವ ಜಾತಿ ಧರ್ಮವನ್ನು ಮೀರಿ ನಿಂತು, ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಉಡುಪಿ ಅತ್ಯಂತ ಬುದ್ಧಿವಂತರ ಜಿಲ್ಲೆ ಎನ್ನುವ ಹೆಸರು ಪಡೆದಿದೆ. ಕಡಲು ಕೊರೆತ, ಕಾಲು ಸಂಕ ಸೇರಿದಂತೆ ಇಲ್ಲಿನ ಹಲವಾರು ವಿಶಿಷ್ಟ ಸಮಸ್ಯೆಗಳು, ಬೇಡಿಕೆಗಳು ನನ್ನ ಗಮನದಲ್ಲಿವೆ. ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಾನು ಕ್ರಮ ವಹಿಸುತ್ತೇನೆ. ಅಭಿವೃದ್ಧಿಯ ಮೂಲಕ ಉಡುಪಿ ಜಿಲ್ಲೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪ ಮಾಡುತ್ತೇನೆ. ಇದಕ್ಕೆ ಶ್ರೀಕೃಷ್ಣ ಪರಮಾತ್ಮನ ಆಶೀರ್ವಾದ ಮತ್ತು ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇನೆ ಎಂದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಎಚ್., ಪೋಲಿಸ್ ವರಿಷ್ಟಾಧಿಕಾರಿ ಹಾಕೆ ಅಕ್ಷಯ್ ಮಚೇಂದ್ರ ಇತರರು ಉಪಸ್ಥಿತರಿದ್ದರು.


































