ಬಜಗೋಳಿಯಲ್ಲಿ ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸುವುದು ಕಬ್ಬಿಣದ ಕಡಲೆ ಇದ್ದಂತೆ – ಲಕ್ಷ್ಮೀ ಹೆಬ್ಬಾಳ್ಕರ್‌

ಗ್ರಾ. ಪಂ. ಸರಕಾರದ ಅನುದಾನವನ್ನು ಜನತೆಗೆ ತಲುಪಿಸುವ ಸಂಪರ್ಕ ಸೇತುವೆ – ಸುನಿಲ್‌ ಕುಮಾರ್

ಕಾರ್ಕಳ : ಭಾರತ ಹಳ್ಳಿಗಳಿಂದ ಆವೃತವಾಗಿದ್ದು, ರೈತರ ದೇಶವಾಗಿದೆ. ಹಾಗಿರುವಾಗ ಗ್ರಾ. ಪಂಚಾಯತ್‌ಗಳು ಸುಧಾರಣೆಯಾದಲ್ಲಿ ದೇಶ ಅಭಿವೃದ್ಧಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯಪಟ್ಟರು. ಅವರು ಆ. 14 ರಂದು ಮುಡಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಜಗೋಳಿಯಲ್ಲಿ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.

ಶಕ್ತಿ ತುಂಬಿದ ನರೇಗಾ
ಮೊದಲು ಗ್ರಾ. ಪಂಚಾಯತ್‌ಗಳ ಬಗ್ಗೆ ಯಾರು ಹೆಚ್ಚು ಒಲವು ತೋರುತ್ತಿರಲಿಲ್ಲ. ಆದರೆ ಯುಪಿಎ ಸರಕಾರದ ಅವಧಿಯಲ್ಲಿ ಜಾರಿಗೆ ಬಂದ ನರೇಗಾ ಯೋಜನೆ ಗ್ರಾ. ಪಂಚಾಯತ್‌ಗಳಿಗೆ ಶಕ್ತಿ ತುಂಬುವ ಕಾರ್ಯವಾಗಿದೆ. ನರೇಗಾ ಯೋಜನೆ ಮೂಲಕ ಗ್ರಾಮದಲ್ಲಿ ಶಾಲೆ, ಶೌಚಾಲಯ ಹೀಗೆ ಸರ್ವಾಂಗೀಣ ಅಭಿವೃದ್ಧಿಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರದ ಅನುದಾನವನ್ನು ಸದುಪಯೋಗಪಡಿಸಿಕೊಂಡು ಮುಡಾರು ಗ್ರಾ. ಪಂ. ಅವರು ಉತ್ತಮ ರೀತಿಯ ಕಾಮಗಾರಿಯನ್ನು ಕೈಗೊಂಡಿದ್ದಾರೆ ಎಂದರು.

ಕಬ್ಬಿಣದ ಕಡಲೆ
ಅಧಿಕಾರ ಸಿಕ್ಕಾಗ ಅದನ್ನು ಸರ್ಮರ್ಥವಾಗಿ ನಿಭಾಯಿಸಿ ಉತ್ತಮ ನಾಯಕ ಎಂದೆನಿಸಿಕೊಳ್ಳುವುದು ಕಬ್ಬಿಣದ ಕಡಲೆ ಇದ್ದ ಹಾಗೆ, ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿಪರ ಕಾರ್ಯಚಟುವಟಿಕೆಗಳನ್ನು ಮಾಡುತ್ತಿರುವ ಶಾಸಕ ವಿ. ಸುನಿಲ್‌ ಕುಮಾರ್‌ ಅವರ ಕಾರ್ಯವೈಖರಿ ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.

ಬುದ್ಧಿವಂತರಿಂದಾಗಿ ಅಭಿವೃದ್ಧಿ
25 ವರ್ಷಗಳ ಹಿಂದೆ ಜಿಲ್ಲೆಯಾಗಿ ಪರಿವರ್ತನೆಗೊಂಡ ಉಡುಪಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಇಲ್ಲಿರುವ ಜನತೆಯ ಬುದ್ಧಿವಂತಿಕೆಯಾಗಿದೆ. ಈ ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿ ರಾಜಕೀಯ ರಹಿತವಾಗಿ ಸರಕಾರದ ಅನುದಾನಗಳನ್ನು ಮನೆ-ಮನೆಗೆ ತಲುಪಿಸುವ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಂಪರ್ಕ ಸೇತುವೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸುನಿಲ್‌ ಕುಮಾರ್‌ ಮಾತನಾಡಿ, ವ್ಯಾಪಾರದ ದೃಷ್ಟಿಯಿಂದ ಬಜಗೋಳಿ ಪ್ರಮುಖ ಸ್ಥಳವಾಗಿದ್ದು, ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರ ಓಡಾಟವಿರುತ್ತದೆ. ಇಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಿರುವುದು ಸಂತಸ. ಅಲ್ಲದೆ ಪಂಚಾಯತ್‌ ಅಭಿವೃದ್ಧಿಗೂ ಇದು ಉತ್ತಮ ಆದಾಯದ ಮೂಲವಾಗಿದೆ. ಇನ್ನು ಸರಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಗ್ರಾ. ಪಂಚಾಯತ್‌ಗಳು ಸಂಪರ್ಕ ಸೇತುವೆಯಾಗಿದ್ದು, ಈ ನಿಟ್ಟಿನಲ್ಲಿ ಮುಡಾರು ಸೇರಿದಂತೆ ತಾಲೂಕಿನ ಎಲ್ಲಾ ಗ್ರಾ. ಪಂ. ಕಾರ್ಯಪ್ರವೃತ್ತವಾಗುತ್ತದೆ ಎಂದರು.

ಅಧಿಕಾರಿಗಳ ಕೊರೆತೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಅಧಿಕಾರಿಗಳ ಕೊರೆತೆಯಿದೆ. ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರೇ ಆ ಇಲಾಖೆಯ ಮಂತ್ರಿಗಳಾಗಿರುವುದರಿಂದ ಅಧಿಕಾರಿಗಳನ್ನು ಭರ್ತಿಗೊಳಿಸುವ ಕೆಲಸ ಆದಷ್ಟು ಬೇಗ ನಡೆಯಲಿ ಎಂದು ಮನವಿ ಮಾಡಿಕೊಂಡರು.

ಪಂಚಾಯತ್‌ ಅಧ್ಯಕ್ಷ ಸುರೇಶ್‌ ಶೆಟ್ಟಿ, ಉಪಾಧ್ಯಕ್ಷೆ ಅಮೃತಾ, ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಎಸಿ ರಶ್ಮಿ, ಜಿಲ್ಲಾ ಪಂಚಾಯತ್‌ ಸಿಇಓ ಪ್ರಸನ್ನ, ಎಸ್‌ಪಿ ಹಾಕೆ ಅಕ್ಷಯ್‌ ಮಚೀಂದ್ರ ಮೊದಲಾದವರು ಉಪಸ್ಥಿತರಿದ್ದರು. ಪಂಚಾಯತ್‌ ಸದಸ್ಯೆ ವಿನಯ ಡಿ. ಬಂಗೇರಾ ಸ್ವಾಗತಿಸಿದರು. ಶಿಕ್ಷಕ ನಾಗೇಶ್‌ ನಲ್ಲೂರು ಕಾರ್ಯಕ್ರಮ ನಿರೂಪಿಸಿದರು.















































































error: Content is protected !!
Scroll to Top