ವಿದ್ಯಾರ್ಥಿನಿ ಸಾವಿನಲ್ಲಿ ಅನುಮಾನ : ತನಿಖೆಗೆ ತಂದೆ ಒತ್ತಾಯ

ಹಾಸ್ಟೆಲ್‌ ಮಹಡಿಯಿಂದ ಬಿದ್ದು ಸಾವಿಗೀಡಾದ ವಿದ್ಯಾರ್ಥಿನಿ

ಉಡುಪಿ: ಕುಂದಾಪುರದ ಗುರುಕುಲ ವಿದ್ಯಾಸಂಸ್ಥೆಯ ವಸತಿ ನಿಲಯದ ಮಹಡಿಯಿಂದ ಕೆಳಗೆ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಬಗ್ಗೆ ಆಕೆಯ ಹೆತ್ತವರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾರವಾರ ಮೂಲದ ವಿದ್ಯಾರ್ಥಿನಿ ತನ್ವಿ ಜೂ.5ರಂದು ಮುಂಜಾನೆ ಹಾಸ್ಟೆಲ್‌ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎನ್ನಲಾಗಿತ್ತು. ಈ ಸಾವಿನ ಪ್ರಕರಣ ಅನುಮಾನಸ್ಪದವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಲು ಹೆತ್ತವರು ಪೊಲೀಸರನ್ನು ಆಗ್ರಹಿಸಿದ್ದಾರೆ.
ತನ್ವಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, 8ನೇ ತರಗತಿಯವರೆಗೆ ಕಾರವಾರದ ಸೈಂಟ್‌ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಮುಗಿಸಿ 9ನೇ ತರಗತಿಗೆ ಕುಂದಾಪುರ ವಿದ್ಯಾಸಂಸ್ಥೆಗೆ ಸೇರಿಸಲಾಗಿತ್ತು. ಧೈರ್ಯವಂತೆ ಆಗಿದ್ದ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮನಃಸ್ಥಿತಿ ಹೊಂದಿರಲಿಲ್ಲ. ಪೊಲೀಸರು ಈ ಬಗ್ಗೆ ವ್ಯವಸ್ಥಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮೃತ ವಿದ್ಯಾರ್ಥಿನಿ ತಂದೆ ರೋಶನ್‌ ನಾರಾಯಣ ಪಾಲೆಕರ್‌ ಹೇಳಿದ್ದಾರೆ.
ಕಾರವಾರ ಮೂಲದ ಕೋಡಿಬಾಗ್‌ ನಿವಾಸಿಯಾಗಿರುವ ತನ್ವಿ ಈ ವರ್ಷ ಇಲ್ಲಿ ಪ್ರವೇಶ ಪಡೆದಿದ್ದಳು. ಮನೆಯಿಂದ ಹೊರಡುವಾಗಲೂ ಖುಷಿಯಿಂದ ಹೊರಟಿದ್ದಳು. ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಮೇಲೆ ನಮಗೆ ಅನುಮಾನವಿಲ್ಲ. ಆದರೆ ಈ ಸಾವು ಅನುಮಾನದಿಂದ ಕೂಡಿದೆ ಎಂದು ತಂದೆ ರೋಶನ್‌ ಆರೋಪಿಸಿದ್ದಾರೆ.
ಕಾರವಾರ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ರಾಘು ನಾಯ್ಕ ಮಾತನಾಡಿ, ಆತ್ಮಹತ್ಯೆಗೆ ಶರಣಾಗುವಷ್ಟು ನೋವಿನಲ್ಲಿ ಆಕೆ ಇರಲಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಈ ಸಾವಿನಲ್ಲಿ ಅನುಮಾನವಿದ್ದು, ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.











































































error: Content is protected !!
Scroll to Top